ಬೆಳ್ತಂಗಡಿ: ಕಳ್ಳತನದ ವೇಳೆ ಆಕಸ್ಮಿಕ ಸಾವು; ಮತ್ತೊಬ್ಬ ಆರೋಪಿ ಬಂಧನ
ಬೆಳ್ತಂಗಡಿ: ಇತ್ತೀಚೆಗೆ ನಡೆದಿದ್ದ ಮುಸ್ತಾಕ್ ಅಸಹಜ ಸಾವು ಪ್ರಕರಣಕ್ಕೆ ಭಾರಿ ತಿರುವು ಸಿಕ್ಕಿದ್ದು, ಕಳ್ಳತನದ ವೇಳೆ ಆಕಸ್ಮಿಕವಾಗಿ ತಂತಿ ಸಿಲುಕಿ ಆತ ಮೃತಪಟ್ಟಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶಿಪಟ್ನ ನಿವಾಸಿ ಪಿ. ಇಬ್ರಾಹಿಂ ಲತೀಫ್ (36) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಜೂನ್ 30ರ ರಾತ್ರಿ ಕುವೆಟ್ಟು ಶಕ್ತಿನಗರದ ಸಂಸ್ಥೆಯೊಂದರಲ್ಲಿ ಮೃತ ಮುಸ್ತಾಕ್, ಇಬ್ರಾಹಿಂ ಲತೀಫ್ ಹಾಗೂ ಮತ್ತೊಬ್ಬ ಆರೋಪಿ ಸೇರಿ ಅಲ್ಯೂಮಿನಿಯಂ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಕಬ್ಬಿಣದ ತಂತಿ ಕುತ್ತಿಗೆಗೆ ಸಿಲುಕಿ ಮುಸ್ತಾಕ್ ಸ್ಥಳದಲ್ಲೇ ಮೃತಪಟ್ಟಿದ್ದ. ಜುಲೈ 1ರಂದು ಇದು ಅಸಹಜ ಸಾವು ಎಂದು ದಾಖಲಾಗಿತ್ತು, ಆದರೆ ಪೊಲೀಸರು ತನಿಖೆ ನಡೆಸಿ ಜುಲೈ 14ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 550 ಕೆಜಿ ಅಲ್ಯೂಮಿನಿಯಂ ವೈರ್ ವಶಪಡಿಸಿಕೊಳ್ಳಲಾಗಿದ್ದು, ಈತ ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಒಟ್ಟು 16 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.



