ಮುಹಮ್ಮದ್ ಕುಕ್ಕುವಳ್ಳಿ ‘ಭಾರತ ಸೇವಾ ರತ್ನ ಪ್ರಶಸ್ತಿ’ಗೆ ಆಯ್ಕೆ
ಪುತ್ತೂರು: ಸಮಾಜ ಸೇವಕ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಪ್ರೆಸ್ ಕ್ಲಬ್, ಪ್ರತಿ ವರ್ಷ ನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ನೀಡುತ್ತಾ ಬಂದಿದ್ದು 2025ನೇ ಸಾಲಿನ ಸಾಧಕರ ಸಮಾಗಮ ಕಾರ್ಯಕ್ರಮ ಬೆಂಗಳೂರು ವಿಶ್ವ ವಿದ್ಯಾಲಯದ ಕಲಾಗ್ರಾಮದಲ್ಲಿ ಜ.13ರಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ನಾಡಿನ 11 ಸಾಧಕರಿಗೆ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಪವಾಡ ಶ್ರೀ ಬಸವಣ್ಣ ದೇವರ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ನೀಡಲಾಗುತ್ತದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಲೋಕಸಭಾ ಸದಸ್ಯ ಪಿ.ಸಿ ಮೋಹನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮುಹಮ್ಮದ್ ಕುಕ್ಕುವಳ್ಳಿಯವರು ಉದ್ಯಮಿಯಾಗಿದ್ದು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ‘ಸೂರಿಲ್ಲದವರಿಗೊಂದು ಆಸರೆ’ ಯೋಜನೆಯ ಮೂಲಕ ನೂರಾರು ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಸಹಾಯಹಸ್ತ ಚಾಚುತ್ತಿರುವ ಇವರು ಮಾನವೀಯ ಸೇವೆಗಳ ಮೂಲಕ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಮುಹಮ್ಮದ್ ಕುಕ್ಕುವಳ್ಳಿಯವರು ತಮ್ಮ ಸಾಧನೆಗಾಗಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಸನ್ಮಾನಗಳನ್ನು ಪಡೆದುಕೊಂಡಿದ್ದು ತಮ್ಮ ಸಾಧನೆಗಾಗಿ ವಿದೇಶಗಳಲ್ಲೂ ಸನ್ಮಾನಿತಗೊಂಡಿದ್ದಾರೆ. ಇವರ ಮಾನವೀಯ ಸೇವೆಯನ್ನು ಪರಿಗಣಿಸಿ ಇದೀಗ ಕರ್ನಾಟಕ ಪ್ರೆಸ್ ಕ್ಲಬ್‌ನ ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.



