ಮದುವೆಗೆ ಒಪ್ಪಿದರೆ ಕೇಸು ಯಾಕೆ? ಎಂದು ಕೇಳಿದ್ದೆ: ಕಾನೂನು ಪ್ರಕಾರವೇ ಪ್ರಕರಣ ನಡೆಯಲಿದೆ -ಅಶೋಕ್ ರೈ

ಪುತ್ತೂರು: ಸಹಪಾಠಿಯಿಂದ ಯುವತಿ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ತಾಯಿ ಜೂ. 30ರಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಘಟನೆಯ ಬಳಿಕದ ಬೆಳವಣಿಗೆ ಬಗ್ಗೆ ಅವರು ವಿವರಿಸುವ ವೇಳೆ, ನ್ಯಾಯ ಕೊಡಿಸುವ ವಿಚಾರವಾಗಿ ಶಾಸಕ ಅಶೋಕ್ ಕುಮಾರ್ ರೈ ಯವರ ವಿಚಾರವನ್ನು ಕೂಡ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದು, ಕಳೆದ ಕೆಲವು ದಿನಗಳ ಹಿಂದೆ ನನಗೆ ಪಿ ಜಿ ಜಗನ್ನಿವಾಸ್ ರಾವ್ ಕರೆ ಮಾಡಿ ಅವರ ಮಗನ ವಿಷಯವನ್ನು ನನ್ನ ಬಳಿ ಹೇಳಿದ್ದರು. ಹೀಗೀಗೆ ಘಟನೆ ನಡೆದಿದೆ. ನಾವು ಠಾಣೆಯಲ್ಲಿದ್ದೇವೆ. ಯುವತಿ ತಾಯಿಯೂ ನಮ್ಮ ಜೊತೆಯೇ ಇದ್ದಾರೆ. ಘಟನೆ ನಡೆದು ಹೋಗಿದೆ ನನ್ನ ಮಗ ಆಕೆಯನ್ನು ಮದುವೆಯಾಗುವುದಾಗಿ ಒಪ್ಪಿದ್ದಾನೆ, ಈಗ ಅವನಿಗೆ 21 ವರ್ಷ ಪೂರ್ತಿಯಾಗದ ಕಾರಣ ಎರಡು ತಿಂಗಳು ಬಿಟ್ಟು ಆಕೆಯನ್ನು ಮದುವೆಯಾಗುತ್ತಾನೆ ಎಂದು ಹೇಳಿದ್ದರು. ಆ ಬಳಿಕ ಯುವತಿಯ ತಾಯಿ ಕರೆ ಮಾಡಿ ಇದೇ ವಿಚಾರವನ್ನು ಹೇಳಿ ಜಗನ್ನಿವಾಸ್ ರಾವ್ ಮಗ ನನ್ನ ಮಗಳನ್ನು ಮದುವೆಯಾಗುವುದಾಗಿ ಹೇಳಿದ್ದಾರೆ, 21 ವರ್ಷ ಪ್ರಾಯ ಪೂರ್ತಿಯಾಗಿಲ್ಲ ಆದ ಕೂಡಲೇ ಮದುವೆಯಾಗುತ್ತಾರೆ ಎಂದು ನನ್ನಲ್ಲಿ ಹೇಳಿದ್ದರು. ಆಗ ನಾನು ಅವರಲ್ಲಿ ” ಮದುವೆಯಾಗುವುದಾಗಿ ಒಪ್ಪಿಕೊಂಡಲ್ಲಿ ಕೇಸು ಯಾಕೆ? ನಿಮ್ಮೊಳಗೆ ರಾಜಿ ಮಾತುಕತೆ ನಡೆಸಿದ್ದೀರಲ್ಲ ಮದುವೆಯಾಗುವುದಾದರೆ ಸಮಸ್ಯೆ ಇತ್ಯರ್ಥವಾಯಿತಲ್ಲ ಎಂದು ಹೇಳಿದಾಗ ಮಹಿಳೆ ಹೌದು ಎಂದು ಹೇಳಿದ್ದರು. ಆ ನಂತರ ಕೆಲವು ವಾರಗಳ ಬಳಿಕ ಇತ್ತೀಚೆಗೆ ಮಹಿಳೆ ಕರೆ ಮಾಡಿ ಅವನು ಮದುವೆಯಾಗುದಿಲ್ವಂತೆ ಏನು ಮಾಡುವುದು ಎಂದು ಹೇಳಿದ್ದರು. ಮದುವೆಯಾಗದೇ ಇದ್ದಲ್ಲಿ ಕಾನೂನು ಪ್ರಕಾರ ಪ್ರಕ್ರಿಯೆ ನಡೆಯಲಿ ಎಂದು ಹೇಳಿದ್ದೆ ವಿನಾ ನಾನು ಬೇರೇನು ಹೇಳಿಲ್ಲ. ನಾನು ಯಾವುದೇ ಅನ್ಯಾಯ ಯಾರಿಗೂ ಮಾಡಿಲ್ಲ, ಅನ್ಯಾಯ ಮಾಡಿ ನಾನು ಗಳಿಸುವಂತದ್ದೇನಿಲ್ಲ. ಈಗ ಪ್ರಕರಣ ದಾಖಲಾಗಿದೆ,ಮುಂದೆ ಕಾನೂನು ಪ್ರಕಾರವೇ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.