ಕರಾವಳಿ

ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ, ಅಪಪ್ರಚಾರ ಆರೋಪ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪೆರುವಾಯಿ ಗ್ರಾಪಂ ಅಧ್ಯಕ್ಷೆ



ಪುತ್ತೂರು: ‘ನನ್ನ ವಿರುದ್ಧ ಕೆಲ ದಿನಗಳಿಂದ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮೂಲಕ ಭ್ರಷ್ಟಾಚಾರದ ಆರೋಪ ಹೊರಿಸಿ ಅಪಪ್ರಚಾರ ನಡೆಸುತ್ತಿದ್ದು ಇದೇ ರೀತಿಯ ಅಪಪ್ರಚಾರ ಮಾಡುವುದನ್ನು ಅವರು ಮುಂದುವರಿಸಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕಕ್ಷೆ ನಫೀಸಾ ಪೆರುವಾಯಿ ತಿಳಿಸಿದ್ದಾರೆ.

ಆ.15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ದ.ಕ ಜಿಲ್ಲೆಯಿಂದ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದು ಅದರಲ್ಲಿ ಭಾಗವಹಿಸಿದ ಖರ್ಚು ವೆಚ್ಚಗಳನ್ನು ಸರಕಾರವೇ ಭರಿಸುವ ಬಗ್ಗೆ ಸುತ್ತೋಲೆ ಹೊರಡಿಸಿತ್ತು, ಆದರೆ ಅದೇ ವಿಚಾರವನ್ನು ಮುಂದಿಟ್ಟುಕೊಂಡು ಇತ್ತೀಚೆಗೆ ನಡೆದ ಪೆರುವಾಯಿ ಗ್ರಾ.ಪಂ ಗ್ರಾಮ ಸಭೆಯಲ್ಲಿ ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಗ್ರಾಮದ ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡು ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಆರೋಪಿಸಿದ್ದಾರೆ, ಅಲ್ಲದೇ ನನ್ನ ವಿರುದ್ಧ ಇನ್ನಿತರ ಭ್ರಷ್ಟಾಚಾರ ಆರೋಪವನ್ನು ಮಾಡಿದ್ದು ನನ್ನ ಏಳಿಗೆಯನ್ನು ಸಹಿಸದ ಕೆಲವರು ಈ ರೀತಿಯ ಸುಳ್ಳು ಆರೋಪ, ಅಪಪ್ರಚಾರವನ್ನು ಮಾಡುತ್ತಿದ್ದಾರೆ, ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಆರೋಪಿಸುವವರು ಅದಕ್ಕೆ ದಾಖಲೆ ಹಾಗೂ ಸಾಕ್ಷಿ ಒದಗಿಸಲಿ, ಯಾವುದೇ ದಾಖಲೆ ಆಧಾರಗಳಿಲ್ಲದಿದ್ದರೂ ಸುಮ್ಮನೆ ಸುಳ್ಳು ಆರೋಪ ಹೊರಿಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ನಾನು ಗ್ರಾಮದ ಅಭಿವೃದ್ಧಿಯ ಕನಸಿನೊಂದಿಗೆ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶದಿಂದ ಅಲ್ಲ, ಭ್ರಷ್ಟಾಚಾರ ಮಾಡುವ ಗತಿಗೇಡು ನನಗೆ ಬಂದಿಲ್ಲ, ಅಂತಹ ದುಡ್ಡಿನ ಅವಶ್ಯಕತೆಯೂ ನನಗಿಲ್ಲ, ಆರೋಪ ಮಾಡುವವರು ನನ್ನ ಮೇಲಿನ ವೈಯಕ್ತಿಕ ದ್ವೇಷವನ್ನು ಗ್ರಾಮ ಪಂಚಾಯತ್ ಮೂಲಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಅನುಮಾನ ಇದೆ. ಓರ್ವ ಹೆಣ್ಣಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎನ್ನುವುದನ್ನು ಆರೋಪ ಮಾಡುವವರು ಯೋಚಿಸಬೇಕು, ಆರೋಪಗಳ ಮೂಲಕ, ಅಪಪ್ರಚಾರಗಳ ಮೂಲಕ ನನ್ನನ್ನು ಕುಗ್ಗಿಸಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದನ್ನು ಈಗಲೇ ಬಿಟ್ಟುಬಿಡಿ, ಅಂತಹ ಯಾವುದೇ ಆರೋಪ, ಅಪಪ್ರಚಾರಕ್ಕೆ ಕುಗ್ಗುವವಳು, ಹಿಂಜರಿಯುವವಳು ನಾನಲ್ಲ, ನಾನು ಏನೆಂದು ನನಗೆ ಮತ್ತು ಗ್ರಾಮಸ್ಥರಿಗೆ ತಿಳಿದಿದೆ. ಗ್ರಾಮಸ್ಥರ ಸಹಕಾರದೊಂದಿಗೆ ಮುಂದಕ್ಕೂ ಗ್ರಾಮದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ನನ್ನ ವಿರುದ್ಧ ಅಪಪ್ರಚಾರ, ತೇಜೋವಧೆ ಮಾಡುತ್ತಿರುವುದನ್ನು ನಿಲ್ಲಿಸದೇ ಇದ್ದಲ್ಲಿ ಕಾನೂನು ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನಫೀಸಾ ಪೆರುವಾಯಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!