ಸುಳ್ಯ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್‌ನಿಂದ ನಂದಕುಮಾರ್ ಸ್ಪರ್ಧೆಗೆ ಕಾರ್ಯಕರ್ತರ ಒಲವು?
ಕಾರ್ಯಕರ್ತರ ಜೊತೆ ಬೆರೆಯುವ ನಂದಕುಮಾರ್‌ಗೆ ಅವಕಾಶ ನೀಡುವಂತೆ ಆಗ್ರಹ
ಮುಂದಿನ ವಿಧಾನಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಎಚ್.ಎಂ ನಂದಕುಮಾರ್‌ರವರನ್ನು ಅಭ್ಯರ್ಥಿಯನ್ನಾಗಿಸಬೇಕು ಎನ್ನುವ ಆಗ್ರಹ ಸಾಮಾಜಿಕ ಜಾಲ ತಾಣಗಳಲ್ಲೂ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಹೆಚ್ಚಿನ ಕಾರ್ಯಕರ್ತರ ಒಲವು ನಂದಕುಮಾರ್‌ರವರ ಪರ ಇರುವಂತೆ ಕ್ಷೇತ್ರದಲ್ಲಿ ಕಂಡು ಬರುತ್ತಿದ್ದು ಅನೇಕ ಆಕಾಂಕ್ಷಿಗಳ ಮಧ್ಯೆ ನಂದಕುಮಾರ್ ಹೆಸರು ಇದೀಗ ಮುಂಚೂಣಿಯಲ್ಲಿದೆ.

ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಎರಡು ಹೆಸರುಗಳು ಮುಂಚೂಣಿಯಲ್ಲಿದ್ದು ಟಿಕೆಟ್ ಆಕಾಂಕ್ಷಿಯಾಗಿರುವ ಜಿ ಕೃಷ್ಣಪ್ಪರವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗಿದ್ದು ಇತ್ತ ಎಚ್.ಎಂ ನಂದಕುಮಾರ್‌ರವರು ಪಕ್ಷದ ಕಾರ್ಯಕರ್ತರೊಂದಿಗೆ ಮತ್ತು ಸಾರ್ವಜನಿಕ ವಲಯದಲ್ಲಿ ನಿರಂತರವಾಗಿ ಓಡಾಡಿಕೊಂಡಿದ್ದಾರೆ, ಹಾಗಾಗಿ ನಂದಕುಮಾರ್ ಅವರಿಗೇ ಈ ಬಾರಿಯ ಕಾಂಗ್ರೆಸ್ ಟಿಕೆಟ್ ನೀಡಬೇಕು ಎನ್ನುವ ಒಕ್ಕೊರಳ ಒತ್ತಾಯ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ವಲಯದಿಂದ ವ್ಯಕ್ತವಾಗುತ್ತಿದೆ.
ಜಿ ಕೃಷ್ಣಪ್ಪರವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಗುರುತಿಸುವಿಕೆಯಲ್ಲಿ ಟಿಕೆಟ್ ಸಿಗುವ ಬಗ್ಗೆ ನಿರ್ಧರಿಸಲಾಗಿದೆಯೇ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ನಂದಕುಮಾರ್‌ರವರ ಕಡೆ ಒಲವು ತೋರುತ್ತಿರುವ ಸಾವಿರಾರು ಮಂದಿ ಅವರ ಅಭಿಮಾನಿಗಳು ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ‘ನಂದಕುಮಾರ್ ನಮ್ಮ ಅಭ್ಯರ್ಥಿ’ ಎಂದು ಎನ್ನುವ ಸಂದೇಶ ಹಂಚುತ್ತಾ ಅವರ ಪರ ಪ್ರಚಾರ ಮಾಡುವ ಉತ್ಸಾಹದಲ್ಲಿ ಇರುವಂತೆ ಕಂಡುಬರುತ್ತಿದೆ.
ಅಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಕೂಡ ಹೆಚ್ಚಿನ ಜನರು ನಂದಕುಮಾರ್‌ರವರ ಪರ ಒಲವು ತೋರುತ್ತಿರುವುದು ಕಂಡು ಬರುತ್ತಿದ್ದು ಸುಳ್ಯ ಕ್ಷೇತ್ರ ಚುನಾವಣಾ ಕಣ ರಂಗೇರುವಂತೆ ಮಾಡಿದೆ.
ಎಚ್.ಎಂ ನಂದಕುಮಾರ್‌ರವರು ಕಳೆದ ಮೂರು ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಓಡಾಟ ನಡೆಸಿ, ತುರ್ತು ಸಂದರ್ಭಗಳಲ್ಲಿ ತನ್ನ ಸೇವೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಮಾಡಿರುವುದು, ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿಗಳ ಆಹಾರ ಸಾಮಗ್ರಿಗಳನ್ನು ತಾವೇ ಫಲಾನುಭವಿಗಳನ್ನು ಹುಡುಕಿ ನೀಡಿರುವುದು, ಧಾರ್ಮಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಿಗೆ ಸಹಾಯಧನ ನೀಡಿ ಸಹಕರಿಸಿರುವುದು…ಹೀಗೇ ಅನೇಕ ಕಾರ್ಯಕ್ರಮಗಳ ಮೂಲಕ ಸುಳ್ಯದಲ್ಲಿ ಮನೆಮಾತಾಗಿದ್ದು ಇವರ ಹೃದಯ ಶ್ರೀಮಂತಿಕೆ ಮತ್ತು ಬಡವರ ಪರವಾದ ಕಾಳಜಿಯಿಂದ ಅವರು ಸುಳ್ಯದಲ್ಲಿ ಸಾವಿರಾರು ಮಂದಿ ಅಭಿಮಾನಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಜಿ ಕೃಷ್ಣಪ್ಪರವರು ಕೂಡ ಸುಳ್ಯದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಕಂಡು ಬರುತ್ತಿದ್ದರೂ ಅವರು ಪಕ್ಷದ ಮುಖಂಡರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ಪಡಸಾಲೆಯಿಂದ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುವುದು ಮಾತ್ರ ಕುತೂಹಲ ಮೂಡಿಸಿದೆ.