ಸರ್ವೆ: ಕಣ್ಮರೆಯಾಗಿರುವ ಯುವಕನ ಪತ್ತೆಗೆ ಅಗ್ನಿ ಶಾಮಕ ದಳದ ಕಾರ್ಯಾಚರಣೆ ಹೇಗಿತ್ತು? ಏನಾಯಿತು?
ಪುತ್ತೂರು: ಸರ್ವೆ ಗೌರಿ ಹೊಳೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಹೊಳೆಯಲ್ಲಿ ತೀವ್ರ ಹುಡುಕಾಟ ನಡೆಸಲಾಗಿದೆ.
ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಎಂಬವರ ಪುತ್ರ ಸನ್ಮಿತ್(21.ವ)ಗೆ ಸೇರಿದ ಡಿಯೋ ದ್ವಿಚಕ್ರ ವಾಹನ ಹೊಳೆಯ ಬದಿಯಿಂದ 150 ಮೀ ದೂರದಲ್ಲಿ ಪತ್ತೆಯಾಗಿದ್ದು ದ್ವಿಚಕ್ರ ವಾಹನದಲ್ಲಿ ಸನ್ಮಿತ್ ಅವರ ಮೊಬೈಲ್ ಫೋನ್, ಪರ್ಸ್, ಟಿಫಿನ್ ಬಾಕ್ಸ್ ಹಾಗೂ ಹೆಲ್ಮೆಟ್ ಪತ್ತೆಯಾಗಿತ್ತು, ಹಾಗಾಗಿ ಸನ್ಮಿತ್ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ.
ಸನ್ಮಿತ್ ಅವರಿಗೆ ಜು.19ರಂದು ಸಂಜೆ ಕರೆ ಮಾಡಿದಾಗ ಇವತ್ತು ಶೋರೂಂನಲ್ಲಿ ಸ್ವಲ್ಪ ಕೆಲಸ ಜಾಸ್ತಿಯಿದ್ದು ಮನೆಗೆ ಬರುವಾಗ ತಡವಾಗಬಹುದು ಎಂದು ಹೇಳಿದ್ದ ಎಂದು ಸನ್ಮಿತ್ ಅವರ ತಂದೆ ಚಂದ್ರ ಗೌಡ ಹೇಳಿದ್ದಾರೆ. ಸರ್ವೆ ಗೌರಿ ಹೊಳೆಯ ಅಲ್ಪ ದೂರದಲ್ಲಿ ಸನ್ಮಿತ್ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು.
ಸನ್ಮಿತ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಹಿನ್ನೆಲೆಯಲ್ಲಿ ಜು.20ರಂದು ಅಗ್ನಿ ಶಾಮಕ ದಳದವರು ಸರ್ವೆ ಗೌರಿ ಹೊಳೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದವರು ಸುಮಾರು 3 ಕಿಮೀ ವ್ಯಾಪ್ತಿಯಲ್ಲಿ ನಿರಂತರ ಹುಡುಕಾಟ ನಡೆಸಿದ್ದರು. ನುರಿತ ಈಜುಗಾರ ಸವಣೂರು ಮೂಲದ ಉಮರಬ್ಬ ಎಂಬವರು ಅವರ ಜೊತೆ ಹುಡುಕಾಡಲು ಸಹಕರಿಸಿದ್ದರು. ಒಟ್ಟಾರೆಯಾಗಿ ಬೆಳಗ್ಗಿನಿಂದ ಸಂಜೆ ವರೆಗೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವೂ ಸಿಕ್ಕಿಲ್ಲ. ಸಂಜೆಯ ಬಳಿಕ ಹುಡುಕುವ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.