ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಬೆಳೆ ವಿಮೆ ಅವಧಿ ವಿಸ್ತರಣೆಗೆ ಶಾಸಕ ಅಶೋಕ್ ರೈಯವರಿಂದ ಮುಖ್ಯಮಂತ್ರಿಗೆ ಮನವಿ
ಪುತ್ತೂರು: ರೇಶನ್ ಕಾರ್ಡು ತಿದ್ದುಪಡಿ ಹಾಗೂ ಬೆಳೆ ಸಮೀಕ್ಷೆ ಅವಧಿಯನ್ನು ವಿಸ್ತರಣೆ ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಶಾಸಕರು ದೂರವಾಣಿ ಮೂಲಕ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ ರೇಶನ್ ಕಾರ್ಡು ತಿದ್ದುಪಡಿಗೆ ನೀಡಿರುವ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು ಕೊನೇ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ತಿದ್ದುಪಡಿ ಮಾಡಿಸಿಕೊಳ್ಳಲು ಹೆಚ್ಚಿನವರಿಗೆ ಸಾಧ್ಯವಾಗಿಲ್ಲ. ಹಲವಾರು ಮಂದಿಯ ರೇಶನ್ ಕಾರ್ಡುಗಳ ತಿದ್ದುಪಡಿ ಬಾಕಿ ಇದ್ದು ತಿದ್ದುಪಡಿ ಅವಧಿ ಮುಗಿದಿರುವ ಸಮಯವನ್ನು ವಿಸ್ತರಣೆ ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಳೆ ಸಮೀಕ್ಷೆ ವಿಸ್ತರಣೆಗೂ ಮನವಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳೆ ಸಮೀಕ್ಷೆಯ ಅವಧಿ ಮುಗಿದಿದ್ದು ಅದನ್ನು ವಿಸ್ತರಣೆ ಮಾಡುವಂತೆಯೂ ಸೀಎಂ ಅವರಲ್ಲಿ ಶಾಸಕರು ಮನವಿ ಮಾಡಿದ್ದಾರೆ. ಬೆಳೆ ವಿಮೆಗಾಗಿ ಈಗಾಗಲೇ ಬೆಳೆ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು ಅದರ ಅವಧಿ ಸೆ.15 ರಂದು ಕೊನೆಗೊಂಡಿರುತ್ತದೆ. ಬೆಳೆ ಸಮೀಕ್ಷೆ ಇನ್ನೂ ಬಾಕಿ ಇದ್ದು ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅದರ ಅವಧಿಯನ್ನು ವಿಸ್ತರಣೆ ಮಾಡುವಂತೆಯೂ ಶಾಸಕರು ಮನವಿ ಮಾಡಿದ್ದಾರೆ.
ಸ್ಪಂದನೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಮತ್ರಿಗಳು ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.