ಸಕಲೇಶಪುರ ಕಾಡಾನೆ ದಾಳಿಗೆ ಮಹಿಳೆ ಬಲಿ
ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿಯ ವಡೂರು ಗ್ರಾಮದಲ್ಲಿ ನಡೆದಿದೆ.ಕಾಡಾನೆ ದಾಳಿಯಿಂದ ಕವಿತಾ (36. ವ) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಕಾಡಾನೆ ಮಹಿಳೆಯ ಸೊಂಟದ ಭಾಗಕ್ಕೆ ಬಲವಾಗಿ ತುಳಿದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತ ಪಟ್ಟಿದ್ದಾರೆನ್ನಲಾಗಿದೆ.
ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಬೈಕ್ ಸವಾರನ ಮೇಲೆ ಆನೆ ದಾಳಿ ಮಾಡಿತ್ತು. ರಾತ್ರಿ ಸಕಲೇಶಪುರ ತಾಲ್ಲೂಕಿನ, ಕಿರೇಹಳ್ಳಿ ಗ್ರಾಮದ ಬಳಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಚೇತನ್ ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿ,ಬೈಕ್ನ್ನು ಪುಡಿ ಪುಡಿ ಮಾಡಿತ್ತು. ಅದೃಷ್ಟವಶಾತ್ ಸವಾರ ಚೇತನ್ ಕೂದಲೆಳೆ ಪಾರಾಗಿದ್ದ. ಆನೆ ದಾಳಿಯಿಂದ ಮಲೆನಾಡಿನ ಜನತೆ ಭೀತಿಗೊಂಡಿದ್ದಾರೆ