ಕರಾವಳಿ

ಪುತ್ತೂರು:ಶಾಲಾ ತರಗತಿ ಕೊಠಡಿಯೊಳಗೆ ಹಾವು ಪ್ರತ್ಯಕ್ಷ..!

ಪುತ್ತೂರು ಹೊರ ವಲಯದ ಮೇನಾಲ ಸರಕಾರಿ ಉ.ಹಿ.ಪ್ರಾ.ಶಾಲಾ ತರಗತಿ ಕೊಠಡಿಯೊಳಗೆ ಹಾವು ಪ್ರತ್ಯಕ್ಷಗೊಂಡು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಆ.17ರಂದು ನಡೆದಿದೆ.

ಛಾವಣಿಯ ಮೂಲಕ ಒಳಪ್ರವೇಶಿಸಿದ ಹಾವು ಕೊಠಡಿಯ ಗೋಡೆಯ ಮೇಲೆ ಕಂಡು ಬಂದಿದ್ದು ಕೂಡಲೇ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಯಿಂದ ಹೊರ ಕಳುಹಿಸಲಾಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ ಅವರು ಕೂಡಲೇ ಸಂಬಂಧಪಟ್ಟವರಿಗೆ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯ ರಾಮ ಮೇನಾಲ, ಗ್ರಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯವರು, ಸ್ಥಳೀಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಸ್ಥಳಕ್ಕೆ ಆಗಮಿಸಿದ್ದರು.

ನಂತರ ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕ ಈಶ್ವರಮಂಗಲ ಇದರ ಸಂಯೋಜಕರಾದ ಸುಂದರ ಜಿ ನೇತೃತ್ವದಲ್ಲಿ ಶಿವಶಂಕರ್ ಕುಲಾಲ್, ಗಣೇಶ್, ಕೃಷ್ಣ ಮುಂಡ್ಯ ಮೊದಲಾದವರು ಶಾಲಾ ಛಾವಣಿಯೊಳಗೆ ಅವಿತುಕೊಂಡಿದ್ದ ಹಾವನ್ನು ಹಿಡಿಯಲು ಯಶಸ್ವಿಯಾದರು.

ನಂತರ ಮೇನಾಲ ಕ್ಲಸ್ಟರ್ ಸಿಆರ್‌ಪಿ ಜಯಂತಿ ಅವರ ಪುತ್ರಿ ಪೂರ್ಣಪ್ರಜ್ಞ ಅವರು ಹಾವನ್ನು ಕೈಯಲ್ಲಿ ಹಿಡಿದು ಹಾವಿನ ಬಗ್ಗೆ ವಿವರಣೆ ನೀಡಿದರು. ಹಾವು ಬಂದ ಕಾರಣ ಶಾಲಾ ಮಕ್ಕಳು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

Leave a Reply

Your email address will not be published. Required fields are marked *

error: Content is protected !!