ಆರ್ಯಾಪು ಗ್ರಾ.ಪಂ: ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರು ಕಾಂಗ್ರೆಸ್ ಸೇರ್ಪಡೆ
ಪುತ್ತೂರು: ಆರ್ಯಾಪು ಗ್ರಾಪಂನ ಇಬ್ಬರು ಗ್ರಾಪಂ ಸದಸ್ಯರು ಶಾಸಕರಾದ ಅಶೋಕ್ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಣಕ್ಕೆ ಅಧಿಕೃತ ಸೇರ್ಪಡೆಯಾದರು.
ಆರ್ಯಾಪು ಮೂರನೇ ವಾರ್ಡಿನ ಬಿಜೆಪಿ ಬೆಂಬಲಿತ ಸದಸ್ಯರಾದ ಪವಿತ್ರ ರೈ ಹಾಗೂ ಪೂರ್ಣಿಮಾ ರೈ ಕಾಂಗ್ರೆಸ್ ಸೇರಿದ ಗ್ರಾಪಂ ಸದಸ್ಯರು. ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಬಿಜೆಪಿ ಸದಸ್ಯರಿಬ್ಬರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶಾಸಕರಾದ ಅಶೋಕ್ ರೈ ,ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಯವರು ಪಕ್ಷದ ದ್ವಜ ನೀಡಿ ಇಬ್ನರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಈ ವೇಳೆ ಮಾತನಾಡಿದ ಶಾಸಕರು ಪಕ್ಷದ ಸಿದ್ದಾಂತ ಹಾಗೂ ಅಭಿವೃದ್ದಿ ಕಾರ್ಯಗಳನ್ನುಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಅವರಿಬ್ಬರನ್ನೂ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅವರ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ಪಕ್ಷದ ಸಿದ್ದಾಂತ ಹಾಗೂ ನಮ್ಮ ಶಾಸಕರ ಅಭಿವೃದ್ದಿ ಕೆಲಸಗಳನ್ನುಮೆಚ್ಚಿ ನಮ್ಮ ಜೊತೆ ಸೇರಿಕೊಂಡಿದ್ದಾರೆ.ಮುಂದಿನ ದಿನಗಳಲ್ಲಿ ಆರ್ಯಾಪು ಗ್ರಾಪಂ ನಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ ಎಂದು ಹೇಳಿದರು.
ನಮ್ಮನ್ನು ಕಡೆಗಣಿಸಿದ್ದಾರೆ,ಪಕ್ಷದಲ್ಲಿ ಗೌರವ ಇಲ್ಲ: ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಇಬ್ಬರು ಗ್ರಾಪಂ ಸದಸ್ಯರು ಮಾತನಾಡಿ ನಾವು ಕಳೆದ 20 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದೆವು. ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಮತ್ತು ಕಾರ್ಯಕರ್ತರಿಗೆ ಗೌರವ ಇಲ್ಲ. ಅಭಿವೃದ್ದಿ ಕೆಲಸಗಳನ್ನು ಮಾಡುವಲ್ಲಿ ಬಿಜೆಪಿ ಹಿಂದೆ ಇದೆ. ಪುತ್ತೂರು ಶಾಸಕರ ಬಡವರ ಪರ ಇರುವ ಕಾಳಜಿ ಮತ್ತು ಅವರ ಅಭಿವೃದ್ದಿ ಯೋಜನೆಗಳು, ಕಾಂಗ್ರೆಸ್ ಸರಕಾರದ ಬಡವರ ಗ್ಯಾರಂಟಿ ಯೋಜನೆಗಳು ನಮ್ಮನ್ನು ಕಾಂಗ್ರೆಸ್ ಸೇರುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಸಾಮಾಜಿಕ ಜಾಲತಾಣದ ಬ್ಲಾಕ್ ಘಟಕದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.