ಕರಾವಳಿರಾಜಕೀಯ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ:
ಕಾರ್ಯಕರ್ತರಿಗೆ ಪಕ್ಷದಲ್ಲಿ ವಿಶೇಷ ಸ್ಥಾನಮಾನ ಎಂದಿಗೂ ಇದೆ: ಶಾಸಕ ಅಶೋಕ್ ರೈ




ಪುತ್ತೂರು: ಪಕ್ಷದ ಅಭಿವೃದ್ದಿಯಾಗಬೆಕಾದರೆ ಕಾರ್ಯಕರ್ತರು ಮುಖ್ಯ, ಪಕ್ಷದಲ್ಲಿ ಕಾರ್ಯಕರ್ತರ ನೋವು, ನಲಿವುಗಳಿಗೆ ಸ್ಪಂದನೆ ಮಾಡುವ ಮೂಲಕ ಅವರನ್ನು ಗೌರವಿಸುವ ಕೆಲಸ ಮಾಡಬೇಕು ಮತ್ತು ಕಾರ್ಯಕರ್ತರಿಗೆ ಪಕ್ಷದಲ್ಲಿ ಎಂದೆಂದೂ ಸ್ಥಾನಮಾನ ಇದ್ದೇ ಇದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಆ. 5 ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕರ್ತರು ಕಳೆದ ಚುನಾವಣೆಯಲ್ಲಿ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಹಗಲಿರುಳು ದುಡಿದ ಪರಿಣಾಮ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೇವಲ ನಾಯಕರಿಂದ ಮಾತ್ರ ಏನೂ ಮಾಡಲು ಸಾಧ್ಯವಿಲ್ಲ. ಪುತ್ತೂರಿನಲ್ಲಿ , ರಾಜ್ಯದಲ್ಲಿ ಕಾಂಗ್ರೆಸ್ ಇಂದು ಅಧಿಕಾರಕ್ಕೆ ಬಂದಿದ್ದರೆ ಅದರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಬೆವರು ಇದೆ ಅದನ್ನು ನಾವು ಎಂದೂ ಮರೆಯಬಾರದು. ಪುತ್ತೂರು ಕ್ಷೇತ್ರದಲ್ಲಿ ಯಾವುದೇ ಅನುದಾನ ಅಥವಾ ಅಭಿವೃದ್ದಿ ಕೆಲಸಗಳನ್ನು ಮಾಡುವ ಮುನ್ನ ನಾನು ಬೂತ್ ಮತ್ತು ವಲಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಅಥವಾ ಅವರ ಅನುಮತಿಯಿಂದಲೇ ಅನುದಾನವನ್ನು ಇಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

ಪಕ್ಷದ ವಿವಿಧ ಹುದ್ದೆಗಳು ಸೇರಿದಂತೆ ವಿವಿಧ ಸಮಿತಿಗಳಿಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನವನ್ನು ನೀಡಲಾಗುವುದು ಇದರಲ್ಲಿ ಯವುದೇ ಅನುಮಾನ ಬೇಡ. ಪಕ್ಷಕ್ಕಾಗಿ ಯಾರು ಕೆಲಸ ಮಾಡಿದ್ದಾರೆ ಎಂಬುದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಹಿತ ಎಲ್ಲರಿಗೂ ಗೊತ್ತಿದೆ ಅವರ ಮನಸ್ಸಿಗೆ ನೋವಾಗುವ ಕೆಲಸವನ್ನು ಪಕ್ಷ ಎಂದಿಗೂ ಮಾಡಬಾರದು ಎಂದು ಹೇಳಿದರು.

ಕಾರ್ಯಕರ್ತರೇ ಪಕ್ಷದ ಶಕ್ತಿ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ಪಕ್ಷದ ಕಾರ್ಯಕರ್ತರೇ ಪಕ್ಷದ ಶಕ್ತಿಯಾಗಿದ್ದಾರೆ. ಪಕ್ಷದ ಅಧಿಕಾರದಲ್ಲಿರಲಿ, ಇಲ್ಲದಿರಲಿ ಕಾರ್ಯಕರ್ತರು ಪಕ್ಷದಲ್ಲೇ ಇದ್ದುಕೊಂಡು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಬಾರಿಯ ಪುತ್ತೂರು ಕಾಂಗ್ರೆಸ್ ಗೆಲವು ಸಾಕ್ಷಿಯಾಗಿದೆ. ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವ ಮೂಲಕ ಶಾಸಕರು ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿರುವುದು ಅವರಿಗೆ ನೈತಿಕ ಶಕ್ತಿ ತುಂಬಿದಂತಾಗಿದೆ. ಪ್ರತೀ ಬೂತ್ ವಲಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಸರಕಾರ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇದು ಪಕ್ಷಕ್ಕೆ ಹೆಚ್ಚಿನ ಬಲವನ್ನು ತಂದುಕೊಡಲಿದೆ ಎಂದು ಹೇಳಿದರು.

ಕೋಳಿ ಅಂಕಕ್ಕೆ ಪೊಲೀಸರು ಲಂಚ ಕೇಳುತ್ತಾರೆ-ಇಕ್ಬಾಲ್ ಹುಸೇನ್
ಸಭೆಯಲ್ಲಿ ಮಾತನಾಡಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಮಾತನಾಡಿ ಕೋಳಿ ಅಂಕ ಮಾಡಬೇಕಾದರೆ ಪೊಲೀಸರು 30 ರಿಂದ 40 ಸಾವಿರ ಲಂಚ ಕೇಳುತ್ತಾರೆ ಇದು ನಿಲ್ಲಬೇಕಾಗಿದೆ. ಕದ್ದ ಅಡಿಕೆಯನ್ನು ಖರೀದಿ ಮಾಡಿದ್ದಾರೆ ಎಂದು ಕೌಡಿಚ್ಚಾರಿನ ಅಂಗಡಿ ಮಾಲಕನಿಂದ ಸಂಪ್ಯ ಪೊಲೀಸರು 5 ಸಾವಿರ ಲಂಚ ಪಡೆದುಕೊಂಡಿದ್ದಾರೆ, ಸಂಪ್ಯ ಪೊಲೀಸ್ ಪೇದೆಯೊಬ್ಬರು ಈ ಲಂಚವನ್ನು ಪಡೆದುಕೊಂಡಿದ್ದು ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಶಾಸಕರು ಲಂಚ ಪಡೆದಿದ್ದೇ ಆದಲ್ಲಿ ಅಂಥವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.


ಪ್ರತೀ ತಿಂಗಳ 25ನೇ ತಾರೀಕಿನ ನಂತರ ರೇಶನ್ ಅಂಗಡಿಗೆ ಹೋದರೆ ಅವರು ಅಕ್ಕಿ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಪಾಣಾಜೆಯ ಕಾರ್ಯಕರ್ತರೋರ್ವರು ಶಾಸಕರಲ್ಲಿ ದೂರು ನೀಡಿದರು. ಪಾಣಜೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಲಾಯಿತು.ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಕಾರ್ಯಕರ್ತರು ಶಾಸಕರ ಜೊತೆ ಸಂವಾದ ನಡೆಸಿದರು. ಕಾಂಗ್ರೆಸ್ ಪಕ್ಷದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!