ಜಮೀನು ಲೀಸಿಗೆ ಕೊಡುವಂತೆ ಒತ್ತಡ, ಬೆದರಿಕೆ ಹಲ್ಲೆ ಆರೋಪಿಸಿ ಹಿರಿಯ ನಾಗರಿಕೆ ದೂರು ಹಿನ್ನೆಲೆ: ತನಿಖೆಗೆ ಬೆಳ್ಳಾರೆ ಪೊಲೀಸರಿಗೆ ನ್ಯಾಯಾಲಯದ ಆದೇಶ
ಪುತ್ತೂರು: 81 ವರ್ಷ ಪ್ರಾಯದ ಹಿರಿಯ ನಾಗರಿಕರ ಜಮೀನನ್ನು ಲೀಸಿಗೆ ಕೊಡಲು ಒತ್ತಾಯಿಸಿ, ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಬೆಳ್ಳಾರೆ ಪೊಲೀಸ್ ಠಾಣೆಗೆ ಆದೇಶಿಸಿದೆ.
ಕುರಿಯ ಗ್ರಾಮದ ದೇರ್ಕಜೆ ವೆಂಕಟ್ರಮಣ ಭಟ್, ಸವಣೂರು ಗ್ರಾಮದ ಪಣೆಮಜಲು ನಿವಾಸಿ ಜಾಫರ್, ಬಪ್ಪಳಿಗೆ ನಿವಾಸಿ ಸುಭಾಶ್ ರೈ ಆರೋಪಿಗಳು. ಇವರು ಹಿರಿಯ ನಾಗರಿಕೆ, ಕಡಬ ತಾಲೂಕಿನ ಸವಣೂರು ಗ್ರಾಮದ ಸೋಂಪಾಡಿ ನಿವಾಸಿ ನಾಗರತ್ನಮ್ಮ (81 ವರ್ಷ) ಅವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಅಲ್ಲಿದ್ದ 2 ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಮಾತ್ರವಲ್ಲ ಕೋಳಿ ಹಾಗೂ ಆಡು ಸಾಕಿಕೊಂಡಿದ್ದ ದೊಡ್ಡ ಶೆಡ್ಡನ್ನು ಜೆಸಿಬಿಯಲ್ಲಿ ಕೆಡವಿ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ದೂರು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ನಾಗರತ್ನಮ್ಮ ಅವರು ನ್ಯಾಯಾಲಯದ ಕದ ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.
ಏನಿದು ಪ್ರಕರಣ?
ನಾಗರತ್ನಮ್ಮ ಅವರು ಪುಣ್ಚಪ್ಪಾಡಿಯಲ್ಲಿ ಜಮೀನು ಹೊಂದಿದ್ದು, ಅದನ್ನು ಲೀಸಿಗೆ ಕೊಡುವಂತೆ ಆರೋಪಿಗಳು ಒತ್ತಾಯಿಸಿದ್ದರು. ಕೊಡದೇ ಇದ್ದಾಗ ಮೇ 30ರಂದು ನಾಗರತ್ನಮ್ಮ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು, ಹಿರಿಯ ನಾಗರಿಕೆ ನಾಗರತ್ನಮ್ಮ ಅವರಿಗೆ ಬೆದರಿಕೆ ಹಾಕಿದ್ದರು. ಜಮೀನು ಕೊಡದೇ ಇದ್ದರೆ ನಾಗರತ್ನಮ್ಮ ಅವರ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಇದನ್ನು ನಾಗರತ್ನಮ್ಮ ಅವರ ಅಳಿಯ ಆಕ್ಷೇಪಿಸಿದಾಗ, ಅವರಿಗೂ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಇದೇ ಸಂದರ್ಭ ಗೋಣಿಯಲ್ಲಿ ಕಟ್ಟಿಟ್ಟಿದ್ದ 2 ಕ್ವಿಂಟಾಲ್ ಅಡಿಕೆಯನ್ನು ಹೊತ್ತೊಯ್ದಿದ್ದು ಮಾತ್ರವಲ್ಲ, ಆಡು ಹಾಗೂ ಕೋಳಿ ಸಾಕಿಕೊಂಡಿದ್ದ ಬೃಹತ್ ಶೆಡ್ಡನ್ನು ಜೆಸಿಬಿಯಿಂದ ಮುರಿದು ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದು ಹೇಳಲಾಗಿದೆ.