ವಿಟ್ಲ: ದಲಿತ ಬಾಲಕಿ ಅತ್ಯಾಚಾರ ಪ್ರಕರಣ; ಬಾಲಕಿಗೆ ನ್ಯಾಯ ಸಿಗಬೇಕು-ಕೃಷ್ಣ ಪ್ರಸನ್ನ
ವಿಟ್ಲ: ಅಪ್ರಾಪ್ತ ದಲಿತ ಬಾಲಕಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನು ಪೋಕ್ಸೋ ಕಾಯ್ದೆಯಂತೆ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದ ಸಂದರ್ಭ ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಖಂಡಿಸುವ ಕಾರ್ಯವನ್ನು ಮಾಡುತ್ತದೆ. ಈ ಘಟನೆ ಅತ್ಯಂತ ಖಂಡನೀಯವಾಗಿದ್ದು, ದಲಿತ ಬಾಲಕಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಸಿಗಬೇಕು ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಕೃಷ್ಣ ಪ್ರಸನ್ನ ಹೇಳಿದರು.

ವಿಟ್ಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೌರ್ಜನ್ಯ ಎಸಗಿದ ದುಷ್ಕರ್ಮಿಗಳನ್ನು ನಮ್ಮ ಸಂಘಟನೆಯ ಜತೆಗೆ ತಳುಕು ಹಾಕುವ ಕಾರ್ಯ ಕೆಲವು ಹಿತಾಸಕ್ತಿಗಳಿಂದ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ತಪ್ಪು ಮಾಹಿತಿ ರವಾನೆಯಾಗುವ ರೀತಿಯಲ್ಲಿ ಮಾಡಲಾಗುತ್ತಿದೆ. ದುಷ್ಕೃತ್ಯ ಎಸಗಿದ ವ್ಯಕ್ತಿಗಳು ನಮ್ಮ ಕಾರ್ಯಕರ್ತರಲ್ಲ ಮತ್ತು ಸಂಘಟನೆಯ ಜತೆಗೆ ಯಾವುದೇ ಸಂಬಂಧವಿಲ್ಲ. ಕೆಟ್ಟ ಕೆಲಸ ಮಾಡಿದವರು ಯಾವುದೇ ಧರ್ಮದವರಿದ್ದರೂ ಅದನ್ನು ಬಜರಂಗದಳ ಖಂಡಿಸುತ್ತದೆ. ಹಿಂದು ಹುಡುಗರೆಲ್ಲರೂ ಬಜರಂಗದಳದ ಕಾರ್ಯಕರ್ತರಲ್ಲ. ಬಜರಂಗದಳದ ಕಾರ್ಯಕರ್ತರು ಅಂತಹ ಕೆಲಸ ಮಾಡಿದ್ದರೂ, ಅದನ್ನು ಖಂಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.
ಯಾರೇ ತಪ್ಪು ಮಾಡಿದರೂ ಅದನ್ನು ಬಜರಂಗದಳದ ಜತೆಗೆ ಸೇರಿಸುವ ಕಾರ್ಯ ಮುಂದಿನ ದಿನದಲ್ಲಿ ನಡೆಯುವ ಸಾಧ್ಯತೆಗಳಿದೆ. ಸರ್ಕಾರ ಬಜರಂಗದಳವನ್ನು ನಿಷೇಧ ಮಾಡುವ ವಿಚಾರವನ್ನು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದು, ಈ ಮನಸ್ತಿತಿಗೆ ಪೂರಕವಾಗಿ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ. ಸಮಾಜದ್ರೋಹಿ, ದೇಶದ್ರೋಹಿ ಕೆಲಸವನ್ನು ಸಂಘಟನೆ ಮಾಡುತ್ತಿಲ್ಲ, ಸಮಾಜಕ್ಕಾಗಿ ಏನೆಲ್ಲಾ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸಮಾಜ ಘಾತುಕ ಹಾಗೂ ಹಿಂದೂ ವಿರೋಧಿ ಸಂಘಟನೆಗಳಿಂದ ಬಜರಂಗದಳದ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಘಟನೆಗೆ ತಳುಕು ಹಾಕುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ತಿಳಿಸಿದರು.
ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ವಿಶ್ವಹಿಂದೂ ಪರಿಷದ್ ಮುಖಂಡ ಪದ್ಮನಾಭ ಕಟ್ಟೆ ಉಪಸ್ಥಿತರಿದ್ದರು.