ಮಾದಕ ವ್ಯಸನಿಗಳಿಗೆ ಈ ಮಸೀದಿಯಲ್ಲಿ ಪ್ರವೇಶ ನಿಷೇಧ..! ಜಮಾಅತ್ ನಿಂದ ದಿಟ್ಟ ನಿರ್ಧಾರ
ಡ್ರಗ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಸೀದಿಯ ಜಮಾತ್ ಕಮಿಟಿಯೊಂದು ದಿಟ್ಟ ಹೆಜ್ಜೆ ಇಟ್ಟಿದೆ. ತಮ್ಮ ಸಮುದಾಯದ ಯುವಕರು ಮಾದಕ ದ್ರವ್ಯದ ದಾಸರಾಗಬಾರದೆಂದು, ಮಾದಕ ದ್ರವ್ಯ ಸೇವನೆಯನ್ನು ನಿಯಂತ್ರಿಸಲು ಕೊಡಗಿನ ಜಮಾತ್ ವಿಶಿಷ್ಟ ಕ್ರಮಗಳನ್ನು ಕೈಗೊಂಡಿದೆ. ಮಾದಕ ದ್ರವ್ಯ ಸೇವನೆಯ ವಿರುದ್ಧ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡುವ ಸಂಕ್ಷಿಪ್ತ, ಕಟ್ಟುನಿಟ್ಟಾದ ಸೂಚನೆಯನ್ನು ಕೊಂಡಂಗೇರಿ ಮಸೀದಿಯ ಹೊರಗೆ ಅಂಟಿಸಲಾಗಿದೆ.

ಕೊಡಗಿನಾದ್ಯಂತ ಮಾದಕ ದ್ರವ್ಯ ಸೇವನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕೊಡಗು ಪೊಲೀಸರು ಮಾದಕ ವಸ್ತುಗಳ ಮಾರಾಟ ಪ್ರಕರಣಗಳಲ್ಲಿ ಹೆಚ್ಚಾಗಿ ಯುವಕರನ್ನು ಬಂಧಿಸುತ್ತಿದ್ದಾರೆ. ಹೀಗಾಗಿ ಮಾದಕ ವಸ್ತುಗಳ ಸೇವನೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಸುನ್ನಿ ಮುಸ್ಲಿಂ ಜಮಾತ್ ವಿಶಿಷ್ಟ ಹೆಜ್ಜೆ ಇಟ್ಟಿದೆ. ಗ್ರಾಮದ ಮಸೀದಿ ಆವರಣದ ಹೊರಗೆ, ಜಮಾತ್ ಸಮಿತಿಯು ಮಾದಕ ದ್ರವ್ಯ ಸೇವನೆಯಲ್ಲಿ ತೊಡಗಿರುವ ಯುವಕರನ್ನು ಜಮಾತ್ ಮತ್ತು ಮಸೀದಿಗೆ ಪ್ರವೇಶಿಸುವುದನ್ನು ಬಹಿಷ್ಕರಿಸುವ ಪೋಸ್ಟರ್ ಅನ್ನು ಅಂಟಿಸಿದೆ. ಡ್ರಗ್ಸ್ ಬಳಸುವ ಜನರನ್ನು ನಿಷೇಧಿಸುವುದರ ಜೊತೆಗೆ, ಸ್ಟೈಲ್ ಎಂದು ವಿಲಕ್ಷಣ ಕೇಶವಿನ್ಯಾಸವನ್ನು ಮಾಡಿಸಿಕೊಳ್ಳುವ ಯುವಕರನ್ನೂ ಜಮಾತ್ನಿಂದ ನಿಷೇಧಿಸಲಾಗಿದೆ. ಮತ್ತು ಹರಿದ ಬಟ್ಟೆಗಳನ್ನು ಧರಿಸಿ ಮಸೀದಿಗೆ ಪ್ರವೇಶಿಸುವುದನ್ನು ಜಮಾತ್ ನಿಷೇಧಿಸಿದೆ