ಕರಾವಳಿಕ್ರೈಂ

ಸುಳ್ಯ: ನೀರಿನಲ್ಲಿ ಕೊಚ್ಚಿ ಹೋಗಿದ್ದ ಕಾರ್ಮಿಕನ ಮೃತದೇಹ ಪತ್ತೆ: ಅಗ್ನಿಶಾಮಕ ದಳ, ಎಸ್.ಡಿ.ಆರ್.ಎಫ್ ಹಾಗೂ ಪೈಚಾರು ಮುಳುಗು ತಜ್ಞರ ತಂಡದ ಕಾರ್ಯಾಚರಣೆ



ಸುಳ್ಯ ತಾಲೂಕಿನ ಕೂರ್ನಡ್ಕ ಗಡಿ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೂಲಿ ಕಾರ್ಮಿಕನ ಮೃತದೇಹ ಜು.9ರಂದು ಪತ್ತೆಯಾಗಿದೆ.
ಕುಂದಲ್ಪಾಡಿ ಪೆರಾಜೆ ಎಂಬಲ್ಲಿ ರಬ್ಬರ್ ಟ್ಯಾಪರ್ ಆಗಿದ್ದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಸಮೀಪದ ನಾರಾಯಣನ್ ಎಂಬವರು ಕೂರ್ನಡ್ಕದಲ್ಲಿ ಪಾಲ ದಾಟಿ ಬರುತ್ತಿದ್ದಾಗ ನೀರು ಪಾಲಾಗಿದ್ದರು.





ಅಂದಿನಿಂದಲೇ ಶೋಧ ಕಾರ್ಯ ಆರಂಭಗೊಂಡಿತ್ತು. ಸುಳ್ಯ ಅಗ್ನಿಶಾಮಕ ದಳ, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಇಲಾಖೆಯವರ ಜತೆ ಅರಂತೋಡು ಕಲ್ಲುಗುಂಡಿ ವಿಖಾಯ ತಂಡ ಹಾಗೂ ಪೈಚಾರಿನ ಮುಳುಗು ತಜ್ಞರು ಕೂಡಾ ಶೋಧ ಕಾರ್ಯದಲ್ಲಿ ತೊಡಗಿದ್ದರು.
ಇದೀಗ ಆಲೆಟ್ಟಿಯ ನೆಡ್ಚಿಲ್ ಬಳಿಯಲ್ಲಿ ಪಯಸ್ವಿನಿ ಹೊಳೆ ಮಧ್ಯೆ ಪೊದೆಯಲ್ಲಿ ಸಿಲುಕಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆ ಪ್ರದೇಶದಲ್ಲಿ ಪೈಚಾರಿನ ಮುಳುಗು ತಜ್ಞರು ಶೋಧ ಕಾರ್ಯ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಯಿತೆಂದು ತಿಳಿದುಬಂದಿದೆ.

ಅಗ್ನಿ ಶಾಮಕ ದಳದ ಅಧಿಕಾರಿ ಕಲ್ಲಪ್ಪರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೈಚಾರು ಈಜು ತಜ್ಞರ ತಂಡದ ಶರೀಫ್, ಅಬ್ಬಾಸ್ ಶಾಂತಿನಗರ, ಶಿಯಾಬ್, ಸವಾದ್ ಪೈಚಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!