ಪುತ್ತೂರು: ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಕಾಂಗ್ರೆಸ್ ಸೇರ್ಪಡೆ ವದಂತಿ..!
ಪುತ್ತೂರು: ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹರಿದಾಡಿ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಜೆಡಿಎಸ್ ಕನಿಷ್ಠ ಮತ ಪಡೆದುಕೊಂಡಿತ್ತಲ್ಲದೇ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶ್ರಫ್ ಕಲ್ಲೇಗ ಅವರಿಗೆ ಟಿಕೆಟ್ ನೀಡದೇ ಕಾಂಗ್ರೆಸ್ನಿಂದ ಬಂದ ದಿವ್ಯಪ್ರಭಾ ಗೌಡ ಅವರಿಗೆ ಟಿಕೆಟ್ ನೀಡಿತ್ತು. ಇದೀಗ ಅಶ್ರಫ್ ಕಲ್ಲೇಗ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದರೆ ಇದನ್ನು ಅಶ್ರಫ್ ಕಲ್ಲೇಗ ಅಲ್ಲಗಳೆದಿದ್ದಾರೆ.
‘ನಾನು ಕಾಂಗ್ರೆಸ್ ಸೇರುವ ಯಾವುದೇ ಚಿಂತನೆ ನಡೆಸಿಲ್ಲ, ಅನೇಕ ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡು ಬಂದಿದ್ದು ಅದರಲ್ಲೇ ಮುಂದುವರಿಯುತ್ತೇನೆ, ಕಾಂಗ್ರೆಸ್ ಸೇರ್ಪಡೆ ಎನ್ನುವುದು ಸುಳ್ಳು ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಅಶ್ರಫ್ ಕಲ್ಲೇಗ ಸ್ಪಷ್ಟಪಡಿಸಿದ್ದಾರೆ.