ಪುಣಚದಲ್ಲಿ ಅಕ್ರಮ ಮರಳುಗಾರಿಕೆ: ನಾಲ್ವರು ವಶಕ್ಕೆ, ಮರಳು ತುಂಬಿದ್ದ ಪಿಕಪ್ ವಾಹನ ಸಹಿತ ಸೊತ್ತುಗಳು ಪೊಲೀಸ್ ವಶಕ್ಕೆ
ವಿಟ್ಲ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ದಂಬೆ ಎಂಬಲ್ಲಿ ಸಾರ್ವಜನಿಕ ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ.19ರಂದು ಬೆಳಿಗ್ಗೆ ಅಕ್ರಮವಾಗಿ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ಐ ರತ್ನಕುಮಾರ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು. ಈ ವೇಳೆ ಮರಳು ತುಂಬಿಸುತ್ತಿದ್ದ ವಿಶ್ವಾಸ್ ಹೆಚ್. (27), ಶಶಿಧರ (45), ಹರೀಶ್ ಅಜ್ಜಿನಡ್ಕ (35) ಹಾಗೂ ಕೇಪು ಗ್ರಾಮದ ಪುಷ್ಪರಾಜ್ ಎನ್. (32) ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮರಳು ತುಂಬಿದ್ದ ಪಿಕಪ್ ವಾಹನ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 236/2026ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.




