“ಅಮ್ಮ, ಈ ಬಾರಿ ಟೂರ್ಗೆ ಹೋಗುವುದು ಬೇಡ ಎಂದಿದ್ದಾರೆ” ಎಂದ ಪುಟ್ಟ ವಿದ್ಯಾರ್ಥಿನಿ; ಮಕ್ಕಳ ನೋವಿಗೆ ಮಿಡಿದ ಶಾಸಕ ಅಶೋಕ್ ರೈ
ಪುತ್ತೂರು: “ಅಮ್ಮ ಹೇಳಿದ್ರು, ದುಡ್ಡಿಲ್ಲ. ಈ ಸಾರಿ ಟೂರ್ಗೆ ಹೋಗುವುದು ಬೇಡ, ಮುಂದಿನ ವರ್ಷ ಹೋಗುವಂತೆ ಹೇಳಿದ್ದಾರೆ. ಅಪ್ಪನಿಗೆ ಹುಷಾರಿಲ್ಲದ ಕಾರಣ ಮನೆಯಲ್ಲಿ ಹಣದ ಸಮಸ್ಯೆಯಿದೆ” ಎಂದು ಪುಟ್ಟ ವಿದ್ಯಾರ್ಥಿನಿಯೊಬ್ಬಳು ಹೇಳಿದ ಮಾತು ಕೇಳಿ ಶಾಸಕ ಅಶೋಕ್ ರೈ ಅವರು ಭಾವುಕರಾದ ಘಟನೆ ನಿಡ್ಪಳ್ಳಿ ಗ್ರಾಮದ ಮುಂಡೂರು ಸರಕಾರಿ ಶಾಲೆಯಲ್ಲಿ ನಡೆದಿದೆ.

ಶಾಸಕ ಅಶೋಕ್ ರೈ ಅವರು ದಿಢೀರ್ ಆಗಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಒಟ್ಟು 38 ವಿದ್ಯಾರ್ಥಿಗಳಿದ್ದು, ಶಿಕ್ಷಕರು ಮಕ್ಕಳೊಂದಿಗೆ ಶಾಲಾ ಪ್ರವಾಸದ ಕುರಿತು ಚರ್ಚಿಸುತ್ತಿದ್ದರು. ಇದೇ ವೇಳೆ ತರಗತಿಗೆ ಆಗಮಿಸಿದ ಶಾಸಕರು, ಮಕ್ಕಳು ಪ್ರವಾಸಕ್ಕೆ ತೆರಳುವ ವಿಚಾರ ತಿಳಿದು, ಯಾರೆಲ್ಲ ಪ್ರವಾಸಕ್ಕೆ ಹೋಗುತ್ತಿದ್ದೀರಿ ಎಂದು ಕೈ ಎತ್ತುವಂತೆ ಹೇಳಿದರು.
ಈ ವೇಳೆ ಸುಮಾರು 14 ವಿದ್ಯಾರ್ಥಿಗಳು ಕೈ ಎತ್ತದೆ ಕುಳಿತಿದ್ದರು. ಇದನ್ನು ಗಮನಿಸಿದ ಶಾಸಕರು, ಪ್ರವಾಸಕ್ಕೆ ಹೋಗದಿರಲು ಕಾರಣವೇನು ಎಂದು ಮಕ್ಕಳನ್ನು ವಿಚಾರಿಸಿದರು. ಆಗ ವಿದ್ಯಾರ್ಥಿಗಳು ಮನೆಯ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದರು. “ಅಮ್ಮನಲ್ಲಿ ಹಣವಿಲ್ಲ, ಮುಂದಿನ ವರ್ಷ ಹೋಗುವಂತೆ ಹೇಳಿದ್ದಾರೆ” ಎಂಬ ಮಕ್ಕಳ ಮಾತು ಶಾಸಕರ ಮನಕಲಕಿತು.
ಕೂಡಲೇ ಸ್ಪಂದಿಸಿದ ಶಾಸಕರು, ಪ್ರವಾಸಕ್ಕೆ ಹೋಗಲು ಸಾಧ್ಯವಾಗದ 14 ವಿದ್ಯಾರ್ಥಿಗಳ ವೆಚ್ಚವನ್ನು ತಾವೇ ಭರಿಸುವುದಾಗಿ ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ 1,500 ರೂ.ಗಳಂತೆ ಒಟ್ಟು 21 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿ, ಎಲ್ಲ ಮಕ್ಕಳೂ ಸಂತೋಷದಿಂದ ಪ್ರವಾಸಕ್ಕೆ ತೆರಳುವಂತೆ ತಿಳಿಸಿದರು. ಶಾಸಕರ ಈ ಮಾನವೀಯ ನಡೆಗೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಶಾಸಕ ಅಶೋಕ್ ರೈ, “ನಾನು ಆರನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯಿಂದ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸಕ್ಕೆ ಹೋಗದ ಮಕ್ಕಳ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಮನೆಗೆ ಬಂದು ಅಮ್ಮನಲ್ಲಿ ಹಣ ಕೇಳಿದ್ದೆ. ಆದರೆ ಅಮ್ಮನ ಬಳಿ ಹಣವಿರಲಿಲ್ಲ. ಎಷ್ಟೇ ಕೇಳಿಕೊಂಡರೂ ಹಣ ಹೊಂದಿಸಲು ಸಾಧ್ಯವಾಗದೆ ಕೊನೆಗೆ ಪ್ರವಾಸಕ್ಕೆ ಹೋಗುವ ನನ್ನ ಆಸೆ ಈಡೇರಿರಲಿಲ್ಲ.
ಇಂದು ಈ ಮಕ್ಕಳು ಹಣದ ಸಮಸ್ಯೆಯಿಂದ ಪ್ರವಾಸಕ್ಕೆ ಹೋಗುತ್ತಿಲ್ಲ ಎಂದು ತಿಳಿಸಿದಾಗ ನನ್ನ ಬಾಲ್ಯದ ಕಷ್ಟದ ದಿನಗಳು ನೆನಪಾದವು. ದೇವರು ಇಂದು ನನಗೆ ಸ್ವಲ್ಪ ಶಕ್ತಿ ನೀಡಿದ್ದಾನೆ. ಹಣದ ಕೊರತೆಯಿಂದ ಈ ಪುಟ್ಟ ಮಕ್ಕಳ ಸಂತೋಷಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ 14 ಮಕ್ಕಳ ಪ್ರವಾಸದ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದೇನೆ. ಮಕ್ಕಳು ಖುಷಿಯಿಂದ ಪ್ರವಾಸಕ್ಕೆ ಹೋಗಲಿ ಎಂಬುದೇ ನನ್ನ ಆಶಯ” ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಆಶಾ ಅವರು ಮಾತನಾಡಿ, “ನಮ್ಮ ಶಾಲೆಯಲ್ಲಿ ಬಹುತೇಕ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರು. ಒಟ್ಟು 38 ಮಕ್ಕಳ ಪೈಕಿ 14 ಮಕ್ಕಳು ಆರ್ಥಿಕ ಅಡಚಣೆಯಿಂದ ಪ್ರವಾಸಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಶಾಸಕರು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿ, ಅವರ ಕಷ್ಟಗಳನ್ನು ಆಲಿಸಿ ಪ್ರವಾಸಕ್ಕೆ ಹೋಗಲು ಸಾಧ್ಯವಾಗದ ಮಕ್ಕಳ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಮಕ್ಕಳಿಗೆ ಅಪಾರ ಸಂತೋಷವಾಗಿದೆ. ಶಾಲೆಯ ಪರವಾಗಿ ಶಾಸಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ತಿಳಿಸಿದರು.




