ಪುತ್ತೂರು ಕ್ಷೇತ್ರದಲ್ಲಿ ಕಡಿಮೆಯಾದ ಕಾಂಗ್ರೆಸ್ ಮತದ ಬಗ್ಗೆ ಚರ್ಚೆ: ಅಶೋಕ್ ರೈ ಆಫೀಸಲ್ಲಿ ಚಾ, ತಿಂಡಿ ತಿಂದ ಹಲವರು ವಿಶ್ವಾಸ ದ್ರೋಹ ಮಾಡಿದ್ದಾರೆ-ವಾಯ್ಸ್ ವೈರಲ್
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆದ್ದು ಶಾಸಕರಾಗಿದ್ದಾರೆ. ಇದೀಗ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಗಳಿಕೆಯಲ್ಲಿ ಕುಸಿತ ಕಂಡಿರುವ ಬಗ್ಗೆ ಚರ್ಚೆ ಶುರುವಾಗಿದೆ.
ಕಳೆದ ಬಾರಿಗಿಂತಲೂ ಈ ಬಾರಿ ಕಡಿಮೆ ಮತ ಕಾಂಗ್ರೆಸ್ ಪಡೆದಿದ್ದು ಇದರ ಬಗ್ಗೆ ವಿವಿಧ ಆಯಾಮಗಳಲ್ಲಿ ಚರ್ಚೆ, ವಿಮರ್ಶೆ ನಡೆಯುತ್ತಿದೆ. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಅಬ್ಬರದ ಚರ್ಚೆ ಜೋರಾಗಿದೆ.
ಈತನ್ಮಧ್ಯೆ ಅನೇಕ ಕಾಂಗ್ರೆಸ್ ಕಾರ್ಯಕರ್ತರ, ಸ್ಥಳೀಯ ಮಟ್ಟದ ನಾಯಕರ ಆಕ್ರೋಶ ಭರಿತ ವಾಯ್ಸ್ ಮೆಸೇಜ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ನಂಬಿದವರೇ ದ್ರೋಹ ಮಾಡಿದ್ದಾರೆ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದೆಲ್ಲಾ ಮಾಡಿರುವ ಆರೋಪ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಮತಗಳು ಪರಿಪೂರ್ಣವಾಗಿ ಅಶೋಕ್ ರೈ ಅವರ ಕೈ ಹಿಡಿದಿದೆ. ಇತರ ಸಮುದಾಯದಿಂದ ನಿರೀಕ್ಷಿಸಿದ ಮತಗಳು ಅಶೋಕ್ ರೈಗೆ ಸಿಗಲಿಲ್ಲ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಮಂಜು ಸುವರ್ಣ ಎಂಬವರ ವಾಯ್ಸ್ ಮೆಸೇಜ್ ವೊಂದು ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಶೋಕ್ ಕುಮಾರ್ ರೈ ಜೊತೆ ಇದ್ದು ಅವರ ಕಚೇರಿಯಲ್ಲಿ ಚಾ, ತಿಂಡಿ ತಿಂದ ಹಲವರು ಮೋಸ ಮಾಡಿದ್ದು ಅವರೆಲ್ಲ ಯಾರೆಂದು ಗೊತ್ತಿದೆ, ಈ ರೀತಿ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡುವುದು ಸರಿಯಲ್ಲ, ನಾಚಿಕೆಗೇಡು ಎಂದು ವಾಯ್ಸ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಗೆ ವೋಟ್ ಹಾಕಿದವರನ್ನು ನಂಬಬಹುದು ಆದ್ರೆ ಈ ರೀತಿ ವಿಶ್ವಾಸ ದ್ರೋಹ ಮಾಡುವವರನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶೋಕ್ ರೈ ಕಡಿಮೆ ಎಂದರು 90 ಸಾವಿರ ಮತ ಪಡೆಯಬೇಕಿತ್ತು ಎನ್ನುವುದು ಮಂಜು ಸುವರ್ಣ ವಾದ.
ಒಟ್ಟಿನಲ್ಲಿ ಅಶೋಕ್ ರೈ ಗೆದ್ದು ವಿಧಾನ ಸಭೆ ಪ್ರವೇಶಿಸಿದರೂ ಪುತ್ತೂರಿನಲ್ಲಿ ಕಾಂಗ್ರೆಸ್ ಪಡೆದ ಮತ ಕಡಿಮೆ ಆಗಿರುವ ಬಗೆಗಿನ ಚರ್ಚೆ ಮಾತ್ರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ