ಕೊಡಗು ಚುನಾವಣಾ ಉಸ್ತುವಾರಿಯಾಗಿ ಹೆಚ್.ಎಂ.ನಂದಕುಮಾರ್
ಸುಳ್ಯ: ಕೆಪಿಸಿಸಿ ಸಂಯೋಜಕ ಹೆಚ್.ಎಂ.ನಂದಕುಮಾರ್ ಅವರಿಗೆ ಕೆಪಿಸಿಸಿ ಕೊಡಗು ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿ ನೀಡಿದೆ. ಕೊಡಗು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಘಟಕಗಳಾದ ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಮಹಿಳಾ ಘಟಕಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ತೊಡಗಿಸುವ ಜವಾಬ್ದಾರಿಯನ್ನು ನಂದಕುಮಾರ್ ಅವರಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಲು ಅವರ ಬೆಂಬಲಿಗರಾದ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹೇರಿದ್ದರು. ಆದರೆ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಚುನಾವಣಾ ಪ್ರಕ್ರಿಯೆಗಳಿಂದ ತಟಸ್ಥರಾಗಿರುವ ಬಗ್ಗೆಯೂ ಕೇಳಿ ಬಂದಿತ್ತು.
ಇದೀಗ ಕೆಪಿಸಿಸಿ ವತಿಯಿಂದ ಕೊಡಗು ಜಿಲ್ಲೆಯ ಉಸ್ತುವಾರಿಯಾಗಿ ನೇಮಕಗೊಳಿಸಿದ್ದು ಮತ್ತೆ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಪಕ್ಷದ ವರಿಷ್ಠರಿಂದ ಆದೇಶ ಬಂದಿದೆ ಎನ್ನಲಾಗಿದೆ.
ಅಭಿಮಾನಿಗಳ, ಕಾರ್ಯಕರ್ತರ ತೀರ್ಮಾನದಂತೆ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿದಿರುವ ನಂದಕುಮಾರ್ ಅವರು ಇನ್ನು ಕೊಡಗು ಚುನಾವಣಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದು ಎಷ್ಟೇ ಭಿನ್ನಾಭಿಪ್ರಾಯ, ಅಸಮಾಧಾನ ಇದ್ದರೂ ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ಒಪ್ಪಿಕೊಂಡು ಕಾರ್ಯ ನಿರ್ವಹಿಸಲಿದ್ದು ಕೊಡಗಿನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲು ಪರಿಶ್ರಮ ಪಡಲಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯದಲ್ಲಿ ಟಿಕೆಟ್ ಸಿಗದಿದ್ದರೂ ಬಂಡಾಯ ಅಭ್ಯರ್ಥಿ ಆಗದೇ ಪಕ್ಷ ನಿಷ್ಠೆ ತೋರಿದ ನಂದಕುಮಾರ್ ಅವರ ನಡೆಗೆ ಕಾಂಗ್ರೆಸ್ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.