ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡ ಸುಳ್ಯದ ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ
ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಸುಳ್ಯದ ಕಳಂಜ ಮೂಲದ ಯುವಕ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ಯುವಕನನ್ನು ಕಳಂಜ ಗ್ರಾಮದ ಮಣಿಮಜಲು ನಿವಾಸಿ ದಿ.ಧರ್ಣಪ್ಪ ಪೂಜಾರಿ ಎಂಬವರ ಪುತ್ರ ಯತೀಶ ಎಂದು ತಿಳಿದುಬಂದಿದೆ. ಯತೀಶರು ಎ.13ರಂದು ಬೆಂಗಳೂರಿನಲ್ಲಿ ತಾನು ವಾಸಿಸುತ್ತಿದ್ದ ಮಹಡಿಯಿಂದ ರಾತ್ರಿ ಸಮಯದಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿರುವ ಬಗ್ಗೆ ಸ್ಥಳೀಯ ಪೊಲೀಸರು ಅವರ ಮನೆಯ ವಿಳಾತಕ್ಕೆ ಮಾಹಿತಿ ನೀಡಿದರೆನ್ನಲಾಗಿದೆ. ಅದರಂತೆ ಮನೆಯವರು ಬೆಂಗಳೂರಿಗೆ ತೆರಳಿ ಆತನನ್ನು ಮಂಗಳೂರಿನ ನೇರಳಕಟ್ಟೆಯ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಕೊನೆಯುಸಿರೆಳೆದರೆನ್ನಲಾಗಿದೆ. ಅವರಿಗೆ 29 ವರ್ಷ ಪ್ರಾಯವಾಗಿತ್ತು.