ನನ್ನನ್ನು ಯಾಕೆ ಬಿಟ್ಟು ಹೋದೆ ಅಮ್ಮಾ…ಸುಳ್ಯ: ತಾಯಿಯಿಂದ ಬೆರ್ಪಟ್ಟು ಗ್ರಾಮದಲ್ಲಿ ಓಡಾಡುತ್ತಿರುವ ಮರಿಯಾನೆ
ಸುಳ್ಯ: ಕಾಡಿನಿಂದ ನಾಡಿಗೆ ಬಂದು ಕೆರೆಗೆ ಬಿದ್ದ ಆನೆ ಮರಿಯೊಂದು ಇದೀಗ ತನ್ನ ತಾಯಿಯಿಂದ ದೂರವಾಗಿದ್ದು ಅಜ್ಜಾವರ ಗ್ರಾಮದಲ್ಲಿ ಓಡಾಡುತ್ತಿದೆ. ಆನೆ ಮರಿಯ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಿದೆ. ತಾಯಿ ಇಲ್ಲದೇ ಪರಿತಪಿಸುತ್ತಿರುವ ಮೂರು ತಿಂಗಳ ಆನೆ ಮರಿಗೆ ಸದ್ಯಕ್ಕೆ ಮನುಷ್ಯರೇ ಆಸರೆಯಾಗಿದ್ದಾರೆ. ಮರಿಯಾನೆಯ ಪರಿಸ್ಥಿತಿ ಕಂಡು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಆಹಾರ ಕಾಡಾನೆಗಳ ಗುಂಪೊಂದು ಅಜ್ಜಾವರದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದಿದ್ದವು. ಅದರಲ್ಲಿ ಎರಡು ದೊಡ್ಡ ಆನೆ ಹಾಗೂ ಇನ್ನೆರಡು ಮರಿ ಆನೆಗಳಾಗಿದ್ದವು. ಆ ಆನೆಗಳು ನೀರಿನಿಂದ ಮೇಲಕ್ಕೆ ಬರಲಾಗದೇ ಚಡಪಡಿಸುತ್ತಿದ್ದವು. ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ ಪರಿಣಾಮ
ಎರಡು ದೊಡ್ಡ ಆನೆ ಮತ್ತು ಒಂದು ವರ್ಷದ ಮರಿ ಆನೆ ನೀರಿನಿಂದ ಮೇಲಕ್ಕೆ ಬಂದಿದ್ದವು.
ಇನ್ನೊಂದು ಆನೆ ಮರಿಗೆ ಕೇವಲ ಮೂರು ತಿಂಗಳಾಗಿದ್ದು ಅದಕ್ಕೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಲೇ ಇಲ್ಲ. ಬಳಿಕ ಆ ಆನೆ ಮರಿಯನ್ನು ಹಗ್ಗ ಕಟ್ಟಿ ಕೆರೆಯಿಂದ ಮೇಲಕ್ಕೆ ಎತ್ತಿ ಗುಡ್ಡಕ್ಕೆ ಬಿಟ್ಟರೂ ತಾಯಿ ಆನೆ ಅದನ್ನು ತನ್ನೊಟ್ಟಿಗೆ ಸೇರಿಸಿಕೊಳ್ಳಲಿಲ್ಲ. ಇದರಿಂದ ಆನೆ ಮರಿ ಒಂಟಿಯಾಗಿದ್ದು ಪರಿಸರದಲ್ಲಿ ಓಡಾಡುತ್ತಿದೆ.
ಆನೆ ಮರಿಗೆ ನೀರು, ಆಹಾರ, ಪೌಷ್ಠಿಕಾಂಶ ನೀಡಿ ಆರೈಕೆ ಮಾಡಲಾಗುತ್ತಿದೆ. ಆನೆ ಮರಿಯನ್ನು ಗುಂಪಿಗೆ ಸೇರಿಸುವ ಪ್ರಯತ್ನ ಮುಂದುವರಿಸಲಾಗುವುದು. ಪರಿಣಿತ ವಿಶೇಷ ತಂಡ ಆಗಮಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.