ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಅವಹೇಳನ: ಆರೋಪಿಯ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಮ್‌ನಲ್ಲಿ ಬಜ್ಜೆ ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕಾಟಿಪಳ್ಳ ನಿವಾಸಿ ಅಭಿಷೇಕ್ ಎಂ. (23) ಬಂಧಿತ ಆರೋಪಿ.

ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಬಜ್ಜೆ ನಿಸರ್ಗ ಹೋಟೆಲ್ ಪೋಟೊ ಬಳಸಿಕೊಂಡು ಅದರ ಮೇಲೆ ಬಜ್ಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜ್ಜೆ ಪೊಲೀಸರಿಂದ ರಾಜಾತಿಥ್ಯ, ದಿನಾಲೂ ನಿಸರ್ಗ ಹೋಟೆಲ್ ನಿಂದ ಬೀಫ್ ಊಟವನ್ನು ನೀಡುತ್ತಿದ್ದಾರೆ. ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಅಪರಾಧಿಗಳೊಂದಿಗೆ ಸೇರಿಕೊಂಡು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ ಎಂದು ಪೊಲೀಸರನ್ನು ನಿಂದಿಸಿ ಪೋಸ್ಟ್ ಮಾಡಿದ್ದ.
ಈ ಬಗ್ಗೆ ಬಜ್ಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಯ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯನ್ನು ಮುಂದಿನ ತನಿಖೆಗಾಗಿ ಸೆನ್ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





