ಪುತ್ತೂರು ಕಾಂಗ್ರೆಸ್ ಟಿಕೆಟ್: ಬೆಂಗಳೂರಿನಲ್ಲಿ ಡಿಕೆಶಿ ಭೇಟಿಯಾದ ಆಕಾಂಕ್ಷಿಗಳಿಂದ ಒಗ್ಗಟ್ಟು ಪ್ರದರ್ಶನ- ಅಶೋಕ್ ರೈ ಗೆ ಟಿಕೆಟ್ ನೀಡದಂತೆ ಒತ್ತಡ..?
ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರಿಗೆ ಕನ್ಫರ್ಮ್ ಆಗಿದೆ ಎನ್ನಲಾಗುತ್ತಿದೆಯಾದರೂ ಇದೀಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಾಗಿ ಬೆಂಗಳೂರಿಗೆ ತೆರಳಿ ಕೆಪಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಪುತ್ತೂರಿನಲ್ಲಿ ಬಿಜೆಪಿ ಪಕ್ಷ ಮಹಿಳೆಯೋರ್ವರಿಗೆ ಅವಕಾಶ ನೀಡಿದ್ದು ಕಾಂಗ್ರೆಸ್ ನಲ್ಲಿಯೂ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ತಒತ್ತಾಯಿಸಿರುವುದಾಗಿ ವರದಿಯಾಗಿದೆ.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ಪುತ್ತೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಿದ್ದು ಡಿಕೆಶಿ ಜೊತೆ ಕೆಲಸ ಸಮಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮಾತುಕತೆಯಲ್ಲಿ ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ.
ಇದಕ್ಕೆ ಉತ್ತರಿಸಿರುವ ಡಿ.ಕೆ ಶಿವಕುಮಾರ್ ಅವರು ಪಕ್ಷದ ಅಭ್ಯರ್ಥಿ ಯಾರೇ ಆದರೂ ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡಬೇಕು. ನಿಮ್ಮ ಬೇಡಿಕೆ, ಆಗ್ರಹವನ್ನು ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದು ಮುಖಂಡರ ನಿಯೋಗಕ್ಕೆ ಭರವಸೆ ನೀಡಿರುವುದಾಗಿ ವರದಿಯಾಗಿದೆ.
ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಹೆಸರು ಅಂತಿಮಗೊಂಡಿದ್ದು ಘೋಷಣೆ ಮಾತ್ರ ಬಾಕಿ ಇದೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸ್ವತಃ ಅಶೋಕ್ ರೈ ಅವರೇ ತನಗೆ ಟಿಕೆಟ್ ಕನ್ಫರ್ಮ್ ಆಗಿರುವ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಲ್ಲದೆ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆಯನ್ನು ನೆರವೇರಿಸಿದ್ದರು. ಇದೀಗ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಹೈಡ್ರಾಮ ನಡೆಯುತ್ತಿದ್ದು ಅಶೋಕ್ ಕುಮಾರ್ ರೈ ರವರಿಗೆ ಪಕ್ಕಾ ಆಗಿರುವ ಟಿಕೇಟನ್ನು ತಡೆ ಹಿಡಿಯುವ ಪ್ರಯತ್ನವಾಗುತ್ತಿದೆ ಎನ್ನಲಾಗುತ್ತಿದೆ.