200 ಯುನಿಟ್ ಉಚಿತ ವಿದ್ಯುತ್, ರೂ.500ಕ್ಕೆ ಗ್ಯಾಸ್ ಬಳಿಕ ಕಾಂಗ್ರೆಸ್’ನಿಂದ ಇನ್ನೊಂದು ಘೋಷಣೆ: ಗೃಹಿಣಿಯರಿಗೆ ಪ್ರತಿ ತಿಂಗಳು ರೂ.2000 ಆರ್ಥಿಕ ನೆರವು
ಮುಂದಿನ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿಯವರು ರೂ.500ಕ್ಕೆ ಗ್ಯಾಸ್ ಸಿಲಿಂಡರ್ ಮತ್ತು ಅಗ್ಗದ ದರಕ್ಕೆ ಪೆಟ್ರೋಲ್, ಡೀಸೆಲ್ ಹಾಗೂ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.
ಇದೀಗ ಇನ್ನೊಂದು ಘೋಷಣೆಯನ್ನು ಕಾಂಗ್ರೆಸ್ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ರೂ.2,000 ನೆರವು ನೀಡುವುದಾಗಿ ಘೋಷಿಸಿದೆ.
ನಗರದ ಅರಮನೆ ಮೈದಾನದಲ್ಲಿ ನಡೆದ ‘ನಾ ನಾಯಕಿ’ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿ ಇರುವ ಗೃಹಲಕ್ಷ್ಮಿ ಯೋಜನೆಯ ಚೆಕ್ ಪ್ರತಿಕೃತಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಅನೇಕ ನಾಯಕರು, ಗೃಹಲಕ್ಷ್ಮಿ ಯೋಜನೆಯ ಘೋಷಣೆಯ ಭಿತ್ತಿಪತ್ರಗಳನ್ನು ಹಿಡಿದು ಭರವಸೆ ನೀಡಿದರು.