ಕೊನೆಯ ಓವರಿನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿದ ರಿಂಕು: IPL ಕ್ರಿಕೆಟ್’ನಲ್ಲಿ ಹೊಸ ದಾಖಲೆ
ರಿಂಕು ಸಿಂಗ್ ಸಿಡಿಸಿದ ಸತತ ಐದು ಸಿಕ್ಸರ್‌ಗಳ ಕಾರಣದಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಎದುರು ರೋಚಕ ಗೆಲುವು ದಾಖಲಿಸಿದೆ.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎ.9ರಂದು ಸಂಜೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 204 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಕೋಲ್ಕತ್ತಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 29 ರನ್‌ಗಳ ಅಗತ್ಯವಿತ್ತು. ಬಹುತೇಕ ಅಸಾಧ್ಯ ಎಂದೇ ಲೆಕ್ಕಾಚಾರ ಹಾಕಿದ್ದ ಪಂದ್ಯಾಟವನ್ನು ರಿಂಕು ತಲೆ ಕೆಳಗೆ ಮಾಡಿದರು.
20ನೇ ಓವರ್ ಬೌಲಿಂಗ್ ಮಾಡಿದ ಮಧ್ಯಮವೇಗಿ ಯಶ್ ದಯಾಳ್ ಅವರ ಮೊದಲ ಎಸೆತವನ್ನು ಎದುರಿಸಿದ ಉಮೇಶ್ ಯಾದವ್ ಒಂದು ರನ್ ಪಡೆದರು. ಸ್ಟ್ರೈಕ್‌ಗೆ ಬಂದ ರಿಂಕು ಸಿಂಗ್ ನಂತರ ಐದು ಎಸೆತಗಳಲ್ಲಿಯೂ ಸಿಕ್ಸರ್‌ಗಳನ್ನು ಎತ್ತಿದರು. ಮೂರು ಫುಲ್ ಟಾಸ್, ಒಂದು ಲೆಂಗ್ತ್ ಮತ್ತು ಒಂದು ನಿಧಾನಗತಿಯ ಶಾರ್ಟ್ ಎಸೆತಗಳನ್ನು ಪ್ರೇಕ್ಷಕರ ಗ್ಯಾಲರಿಗೆ ಬಡಿದಟ್ಟಿದ ಎಡಗೈ ಬ್ಯಾಟ್ಸ್ ಮೆನ್ ರಿಂಕು ಹೀರೊ ಆಗಿ ಮೆರೆದರು.
ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಸಹ ಆಟಗಾರರು ಕ್ರೀಡಾಂಗಣಕ್ಕೆ ಧಾವಿಸಿದರು. ರಿಂಕು ಸಿಂಗ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು. ಇತ್ತ ಯಶ್ ದಯಾಳ್ ಕಣ್ಣೀರು ಹಾಕುತ್ತ ಕುಸಿದರು. ಗುಜರಾತ್ ತಂಡದ ಸಹ ಆಟಗಾರರು ಅವರನ್ನು ಸಂತೈಸಿದರು.