ಭಯೋತ್ಪಾದನೆಗೆ ಧರ್ಮದ ಜೊತೆ ಸಂಬಂಧ ಕಲ್ಪಿಸಬಾರದು-ಅಮಿತ್ ಶಾ
ನವದೆಹಲಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದು ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದೇವೇಳೆ, ಭಯೋತ್ಪಾದನೆಗೆ ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಸಮೂಹದ ಜೊತೆ ಸಂಬಂಧ ಕಲ್ಪಿಸಬಾರದು ಎಂದಿದ್ದಾರೆ.
ಹಿಂಸಾಚಾರ, ಯುವಕರನ್ನು ತಪ್ಪುದಾರಿಗೆಳೆಯುವುದು ಮತ್ತು ಭಯೋತ್ಪಾದನೆಗೆ ಹಣದ ಮೂಲಕ್ಕಾಗಿ ಉಗ್ರರು ನಿಯಮಿತವಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಮೂಲಭೂತವಾದಿ ವಿಷಯಗಳನ್ನು ಹರಡಲು ಮತ್ತು ತಮ್ಮ ಗುರುತನ್ನು ಮರೆಮಾಚಲು ಡಾರ್ಕ್ ನೆಟ್ ಅನ್ನು ಬಳಸುತ್ತಿದ್ದಾರೆ ಎಂದು ಶಾ ಹೇಳಿದರು.
‘ಭಯೋತ್ಪಾದನೆಯು ನಿಸ್ಸಂದೇಹವಾಗಿ, ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆಯಾಗಿದೆ. ಆದರೆ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದು ನಾನು ನಂಬುತ್ತೇನೆ. ಏಕೆಂದರೆ, ಭಯೋತ್ಪಾದನೆಯು ಅಂತಹ ಹಣಕಾಸು ನೆರವಿನಿಂದ ಪೋಷಿಸಲ್ಪಟ್ಟಿವೆ. ಇದಲ್ಲದೆ, ಭಯೋತ್ಪಾದನೆಗೆ ಹಣಕಾಸು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ’ಎಂದು ಗೃಹ ಸಚಿವಾಲಯವು ಇಲ್ಲಿ ಆಯೋಜಿಸಿದ್ದ ‘ಭಯೋತ್ಪಾದನೆಗೆ ಹಣಕಾಸು ನೆರವು ನಿಗ್ರಹ ಕುರಿತ ಸಚಿವರ ಸಮಾವೇಶದಲ್ಲಿ ಶಾ ಹೇಳಿದರು.