ಇಂದು ನಿಂತಿಕಲ್ ನಲ್ಲಿ ನಂದಕುಮಾರ್ ಅಭಿಮಾನಿ ಬಳಗದಿಂದ ಶಕ್ತಿ ಪ್ರದರ್ಶನ:
ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ನಂದಕುಮಾರ್ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನಂದಕುಮಾರ್ ಅವರ ಅಭಿಮಾನಿ ಬಳಗದ ವತಿಯಿಂದ ಬೃಹತ್ ಸಮಾವೇಶ ಎ.9ರಂದು ಸಂಜೆ ನಿಂತಿಕಲ್’ನಲ್ಲಿ ನಡೆಯಲಿದೆ.

ನಂದಕುಮಾರ್ ಅವರಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಈಗಾಗಲೇ ವಿವಿಧ ಸುತ್ತಿನ ಚರ್ಚೆಗಳು, ಮಾತುಕತೆಗಳು, ಪ್ರತಿಭಟನೆಗಳು ನಡೆದಿದ್ದು ಕೆಪಿಸಿಸಿಗೂ ಬಿಸಿ ಮುಟ್ಟಿಸುವ ಪ್ರಯತ್ನವನ್ನು ನಂದಕುಮಾರ್ ಅಭಿಮಾನಿ ಬಳಗದವರು ಮಾಡಿದ್ದರು. ಆದರೂ ಯಾವುದೇ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಇದೀಗ ಮುಂದುವರಿದ ಭಾಗವಾಗಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಈ ಸಮಾವೇಶದಲ್ಲಿ ನಂದಕುಮಾರ್ ಅಭಿಮಾನಿ ಬಳಗದವರು ಹಾಗೂ ಅನೇಕ ಕಾರ್ಯಕರ್ತರು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯಕ್ಕೆ ರಾಜಕೀಯಕ್ಕೆ ಸಂಬಂಧಪಟ್ಟು ಇಂದಿನ ಸಮಾವೇಶ ಬಹು ಮುಖ್ಯವಾಗಿದ್ದು ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರ ನಡೆ ಇಂದಿನ ಕಾರ್ಯಕ್ರಮದ ಮೂಲಕ ಗೊತ್ತಾಗಲಿದೆ. ಈಗಾಗಲೇ ಜಿ ಕೃಷ್ಣಪ್ಪ ಅವರಿಗೆ ಸುಳ್ಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದ್ದು ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ನಂದಕುಮಾರ್ ಅಭಿಮಾನಿ ಬಳಗದವರು ಹಮ್ಮಿಕೊಂಡಿರುವ ಇಂದಿನ ಸಮಾವೇಶ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.
ಇಂದಿನ ಸಮಾವೇಶದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು ಹಾಗೇನಾದರೂ ಸಾವಿರಾರು ಮಂದಿ ಭಾಗವಹಿಸಿದ್ದೇ ಆದಲ್ಲಿ ಸುಳ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.