ಮಾಣಿ-ಮೈಸೂರು ಹೆದ್ದಾರಿಯ ಆಡ್ಕಾರು ಸಮೀಪ ಅಪಾಯವನ್ನು ಆಹ್ವಾನಿಸುತ್ತಿದೆ ಕೇಬಲ್ ದುರಸ್ತಿಗಾಗಿ ಅಗೆದ ಗುಂಡಿ
ಮಾಣಿ ಮೈಸೂರು ಹೆದ್ದಾರಿ ಅಡ್ಕಾರು ಸಮೀಪ ಬಿಎಸ್ ಎನ್ಎಲ್ ಸಂಸ್ಥೆಗೆ ಸೇರಿದ ಟೆಲಿಕಾಂ ಕೇಬಲ್ ಅಳವಡಿಕೆಗಾಗಿ ಬೃಹತ್ ಹೊಂಡವನ್ನು ತೆಗೆದಿಟ್ಟು ಸುಮಾರು 15ರಿಂದ 20 ದಿನಗಳು ಕಳೆಯಿತು.
ಈ ಪ್ರದೇಶ ಮಾಣಿ ಮೈಸೂರು ಹೆದ್ದಾರಿ ಆಗಿರುವ ಹಿನ್ನಲೆಯಲ್ಲಿ ಅಲ್ಲದೆ ಸಮೀಪದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಿದ್ದು ಸಣ್ಣಪುಟ್ಟ ವಿದ್ಯಾರ್ಥಿಗಳು ಈ ರಸ್ತೆಯ ಸಮೀಪವಾಗಿ ಶಾಲೆಗೆ ತೆರಳಬೇಕಾಗುತ್ತದೆ.
ಅಗೆದಿಟ್ಟಿರುವ ಮಣ್ಣು ಮುಖ್ಯ ರಸ್ತೆಗೆ ಬಿದ್ದಿದ್ದು ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಆತಂಕ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಜಾರಿ ಬಿದ್ದಿದ್ದು ಗಾಯಗಳಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸುಮಾರು 15 ಅಡಿಗಳಿಗಿಂತ ಹೆಚ್ಚು ವಿಶಾಲವಾಗಿ ಅಗೆದಿರುವ ಗುಂಡಿ ಅಪಾಯದ ಎಲ್ಲಾ ಮುನ್ಸೂಚನೆಯನ್ನು ನೀಡುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಮುಂದೆ ಉಂಟಾಗಬಲ್ಲ ಅನಾಹುತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.