ಸುಳ್ಯ: ಮೇನಾಲ ದರ್ಗಾ ಪರಿಸರಕ್ಕೆ ಮಂಗಳೂರು ಎಸ್ ಪಿ ರಿಷಂತ್ ಸಿ ಬಿ ಭೇಟಿ
ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ
ಸುಳ್ಯದ ಇತಿಹಾಸ ಪ್ರಸಿದ್ದ ಅಜ್ಜಾವರ ಮೇನಾಲ ಉರೂಸ್ ಕಾರ್ಯಕ್ರಮ ಜೂ.15ರಂದು ಆರಂಭವಾಗಿದ್ದು ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೇನಾಲ ದರ್ಗಾ ಪರಿಸರದಲ್ಲಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.
ಇದರ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ ಪಿ ರಿಷಂತ್ ಸಿ.ಬಿ ಇಂದು ಮೇನಾಲ ಪರಿಸರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮತ್ತು ಪೊಲೀಸ್ ಬಂದೋಬಸ್ಥಿನ ವೀಕ್ಷಣೆಯನ್ನು ನಡೆಸಿದ್ದಾರೆ.
ಬಳಿಕ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿ ನಡೆಯುವ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಕಾರ್ಯಕ್ರಮ ನಡೆಯುವ ಈ ಜಾಗದ ಯತಾಸ್ಥಿತಿಗೆ ಯಾವುದೇ ಧಕ್ಕೆ ಬಾರದಂತೆ ಕಾರ್ಯಕ್ರಮಗಳು ನಡೆಯಬೇಕು.ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ಇಂದಿನಿಂದಲೇ ಆಗಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ ಪಿ ಎನ್ ಎನ್ ಧರ್ಮಪ್ಪ, ಪುತ್ತೂರು ವಿಭಾಗದ ಡಿವೈಎಸ್ಪಿ ಡಾ.ಪಿ ಗಾನಾ ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಉಪಸ್ಥಿತರಿದ್ದರು.
ಮೇನಾಲ ದರ್ಗಾ ಪರಿಸರದ ಕೆಲವು ಸ್ಥಳಗಳು ಕಳೆದ ಕೆಲವು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ.
ಇದೇ ವಿಷಯಕ್ಕೆ ಸಂಬಂಧಿಸಿ ಈ ಉರೂಸ್ ಕಾರ್ಯಕ್ರಮ ತಡವಾಗಿ ನಡೆಯುತ್ತಿದ್ದು ಇದೀಗ ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ ಕಾರ್ಯಕ್ರಮದ ತಯಾರಿಯನ್ನು ನಡೆಸಲಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಅನ್ನು ಏರ್ಪಡಿಸಿದೆ.