ಅಡ್ಯನಡ್ಕ: ಕಾರ್ಯಾಗಾರಕ್ಕೆ ಶಾಲಾ ಮಕ್ಕಳನ್ನು ಕಳುಹಿಸಿದ ವಿಚಾರ: ಮುಖ್ಯೋಪಾಧ್ಯಾಯರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿದ ಆಡಳಿತ ಮಂಡಳಿ
ವಿಟ್ಲ: ಅಡ್ಯನಡ್ಕದಲ್ಲಿ ನಡೆದ ಕಾರ್ಯಾಗಾರವೊಂದಕ್ಕೆ ಶಾಲಾ ಮಕ್ಕಳನ್ನು ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಡ್ಯನಡ್ಕ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕರವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಅಡ್ಯನಡ್ಕ ಎಜ್ಯುಕೇಶನ್‌ನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಫೆ.18 ರಂದು 10ನೇ ತರಗತಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿಯ ಗಮನಕ್ಕೆ ತಾರದೇ ಶೈಕ್ಷಣಿಕ ಕಾರ್ಯಾಗಾರಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಧಾರ್ಮಿಕ ಸಂಘಟನೆಯೊಂದರ ನೇತೃತ್ವದಲ್ಲಿ ರಾಜಕಮಲ್ ಖಾಸಗಿ ಹಾಲ್‌ನಲ್ಲಿ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ ಹಾಗೂ ರಫೀಕ್ ಮಾಸ್ಟರ್ ಆತೂರು ಮತ್ತು ನುಸುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯಷನ್ ನ ಪದಾಧಿಕಾರಿಗಳು, ಜನತಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು, ಕಾರ್ಯಾಗಾರದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿಧ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಾಧವ ಮೂಲ್ಯರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯಕ್, ರಫೀಕ್ ಮಾಸ್ಟರ್ ಆತೂರ್ ಹಾಗೂ ನುಸ್ತುತುಲ್ ಇಸ್ಲಾಂ ಯಂಗ್ ಮನ್ಸ್ ಅಸೋಸಿಯಷನ್‌ನ ಪದಾಧಿಕಾರಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯ ಶಿಕ್ಷಕರ ಅಮಾನತು ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಸಾಮಾಜಿಕ ಜಾಲ ತಾಣದಲ್ಲಿ ಹಲವರು ತಮ್ಮ ಅಸಾಮಾಧಾನ ಹೊರ ಹಾಕಿದ್ದಾರೆ.