ಕರಾವಳಿ

ಭಯಗ್ರಸ್ತ ವಾತಾವರಣವನ್ನು ಹೋಗಲಾಡಿಸಿ ಸಂವಿಧಾನ ರಕ್ಷಿಸಲು ಭಾರತೀಯರೆಲ್ಲರೂ ಒಗ್ಗಟ್ಟಾಗಬೇಕಾಗಿದೆ: ಮಾಡನ್ನೂರಿನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಿರಾಜುದ್ದೀನ್ ಫೈಝಿ ಕರೆ











ಪುತ್ತೂರು: ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಬದ್ಧ ಬಾಳ್ವೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಅವಕಾಶ ಕೊಟ್ಟಿದೆ. ವಿವಿಧ ದೇಶಗಳ ಸಂವಿಧಾನಗಳಲ್ಲಿನ ಆಯ್ಕೆ ಮಾಡಲ್ಪಟ್ಟ ಮೌಲ್ಯಯುತ ವೈಚಾರಿಕ ಅಂಶಗಳಿಂದ ಸಿದ್ದಪಡಿಸಿರುವ ಸಂವಿಧಾನವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಭದ್ರ ಬುನಾದಿ ಮತ್ತು ಅಡಿಪಾಯವಾಗಿದೆ. ಬಹುಮುಖದಲ್ಲಿ ಏಕತೆಯನ್ನು ಕಂಡ ಭಾರತವನ್ನು ಏಕಮುಖ ಭಾರತವಾಗಿ ಪರಿವರ್ತಿಸಲು ಗುರಿ ಹೊಂದಿರುವವರಿಂದ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದು, ಸಂವಿಧಾನ ಪ್ರತಿಪಾದಿಸುವ ಸ್ವಾತಂತ್ರ್ಯ, ಸಮಾನತೆ ಅಪಾಯವನ್ನೆದುರಿಸುತ್ತಿರುವಾಗ ಭಾರತೀಯರೆಲ್ಲರೂ ಒಟ್ಟಾಗಿ ಸಂವಿಧಾನದ ಆಶಯದಂತೆ ಬಾಳಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಬಹುದು ಎಂದು ಮಾಡನ್ನೂರು ಜುಮಾ ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ಹೇಳಿದರು.



ಮಾಡನ್ನೂರು ಮಸೀದಿ ವಠಾರದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಸಂದೇಶ ನೀಡಿದರು.



ದಬ್ಬಾಳಿಕೆ, ದೌರ್ಜನ್ಯ, ಮೂಲಭೂತವಾದ, ಆತಂಕ, ಶೋಷಣೆ, ಹಿಂಸೆ, ಕ್ರೌರ್ಯ ಗಳಿಂದ ಉಂಟಾದ ಭಯಗ್ರಸ್ತ ವಾತಾವರಣ ಕೊನೆಗೊಂಡು ನೆಮ್ಮದಿಯ ನಾಳೆಗಳು ನಮ್ಮದಾಗಲಿವೆ ಎಂದು ಅವರು ಹೇಳಿದರು.



ಮಸೀದಿ ಉಪಾಧ್ಯಕ್ಷ, ವಿಶ್ರಾಂತ ಎಎಸ್‌ಐ ಹಸೈನಾರ್ ಎಂ.ಡಿ ಧ್ವಜಾರೋಹಣಗೈದು ಗಣರಾಜ್ಯ ದಿನದ ಶುಭಾಶಯ ಕೋರಿದರು. ಸಯ್ಯಿದ್ ಬುರ್ಹಾನ್ ತಂಙಳ್ ಮಖಾಂ ಝಿಯಾರತ್ ನೇತೃತ್ವ ವಹಿಸಿದರು. ಮದ್ರಸ ಮುಖ್ಯೋಪಾಧ್ಯಾಯರಾದ ಅಮೀರ್ ಅರ್ಶದಿ ಪ್ರತಿಜ್ಞಾವಿಧಿ ಬೋಧಿಸಿದರು.



ಅಕಾಡೆಮಿಯ ಪ್ರಾಧ್ಯಾಪಕ ಸಿನಾನ್ ಹುದವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೂರುಲ್ ಹುದಾ ಅಕಾಡೆಮಿ ಹಾಗೂ ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಹಾಡಿದರು. ಸಮಾರಂಭದಲ್ಲಿ ಜಮಾಅತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಜಮಾಅತ್ ಬಾಂಧವರು ನೂರುಲ್ ಹುದಾ ಅಕಾಡೆಮಿ ಪ್ರಾಧ್ಯಾಪಕರು, ಮದ್ರಸ ಅಧ್ಯಾಪಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!