ಕರಾವಳಿ

ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯುತ್ತಿದ್ದವರಿಗೆ
ದಂಡದ ಬಿಸಿ ಮುಟ್ಟಿಸಿದ ಕೆದಂಬಾಡಿ ಗ್ರಾ.ಪಂ




ಪುತ್ತೂರು: ರಸ್ತೆ ಬದಿಗೆ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಆಧರಿಸಿ ಕಾರ್ಯಾಚರಣೆ ಮಾಡಿದ ಕೆದಂಬಾಡಿ ಗ್ರಾಪಂ ಆಡಳಿತ ಹಾಗೂ ಅಧಿಕಾರಿ ವರ್ಗದವರು ಕಸ ಸುರಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ.

ಪತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳಿಗೆ ದಂಡ ವಿಧಿಸಿದ್ದು ಅಲ್ಲದೆ ಅವರಿಂದಲೇ ಕಸ ಹೆಕ್ಕಿಸಿ ಕೊಂಡು ಹೋಗುವಂತೆ ಮಾಡಿದ್ದಾರೆ.


ಗ್ರಾಮದ ಕಜೆ ಎಂಬಲ್ಲಿ ಬೈಕ್‌ನಲ್ಲಿ ಬಂದವರು ರಸ್ತೆ ಬದಿಗೆ ಕಸ ಹಾಕುತ್ತಿರುವುದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದು ಪಂಚಾಯತ್‌ಗೆ ನೀಡಿದ್ದರು. ಬೈಕ್‌ನ ನಂಬರ್ ಆಧರಿಸಿ ಕಾರ್ಯಾಚರಣೆ ಮಾಡಿದ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ಹಾಗೂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆಯವರು ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನನ್ನು ಸ್ಥಳಕ್ಕೆ ಕರೆಸಿ ಕಸವನ್ನು ಹೆಕ್ಕಿಸಿದ್ದು ಅಲ್ಲದೆ ದಂಡ ವಿಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸಾರೆಪುಣಿ ಸಮೀಪ ಬೈಕ್‌ನಲ್ಲಿ ಬಂದು ಕಸದ ಕಟ್ಟನ್ನು ಎಸೆದು ಹೋಗುತ್ತಿರುವುದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬರು ಕಸದ ಕಟ್ಟನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಒಂದು ಚೀಟಿ ಹಾಗೂ ಸ್ಕ್ಯಾನಿಂಗ್ ರಿಪೋರ್ಟ್ ಪತ್ತೆಯಾಗಿದ್ದು ಅದನ್ನು ಪಂಚಾಯತ್‌ಗೆ ನೀಡಿದ್ದರು. ಆ ಚೀಟಿಯಲ್ಲಿರುವ ವಿಳಾಸದ ಮೇರೆಗೆ ಆತನನ್ನು ಸ್ಥಳಕ್ಕೆ ಕರೆಸಿ ಕಸವನ್ನು ಹೆಕ್ಕಿಸಿ ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ. ಅಧ್ಯಕ್ಷ ರತನ್ ರೈ ಕುಂಬ್ರ ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!