ಯುವತಿಯ ಮಾನ ಭಂಗಯತ್ನ ಪ್ರಕರಣ: ಆರೋಪಿಯ ಮಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಂಗ ಬಂಧನ ವಿಧಿಸಿದ ಮಂಗಳೂರು ನ್ಯಾಯಾಲಯ
ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಗಂಜಿ ಮಠ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದು ಬೆನ್ನಟ್ಟಿ ಅಸಹ್ಯವಾಗಿ ಸನ್ನೆ ಮಾಡಿ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ ಆರೋಪದಡಿ ತೆಂಕುಳಿ ಪಾಡಿಗ್ರಾಮಾ ಮಳಲಿ ಮಸೀದಿ ಬಳಿ ನಿವಾಸಿ ಶರೀಫ್ ಎಂಬಾತನ ಮೇಲೆ ಬಜಪೆ ಪೋಲಿಸರು ಐಪಿಸಿ ಕಲಂ 354,354 (d),509 ರಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಆಗ ಆರೋಪಿ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಈ ವೇಳೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿ ಮಧ್ಯಂತರ ಜಾಮೀನು ಅರ್ಜಿಯನ್ನು ಪುರಸ್ಕರಿಸದಂತೆ ನ್ಯಾಯಾಲಯವನ್ನು ಮನವಿ ಮಾಡಿಕೊಂಡರು.
ವಿಚಾರಣೆ ನಡೆಸಿದ ಮಂಗಳೂರಿನ ಆರನೇ JMFC ನ್ಯಾಯಾಲಯದ ನ್ಯಾಯಾಧೀಶರು ಸರಕಾರಿ ಅಭಿಯೋಜಕರ ವಾದವನ್ನು ಪುರಸ್ಕರಿಸಿ ಅರೋಪಿ ಪರ ಸಲ್ಲಿಸಿದ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾ ಗೊಳಿಸಿ ಜನವರಿ 23 ರ ವರಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ ವಾದ ಮಂಡಿಸಿದರು.