ನಾನು ಹೆಣ್ಣಾಗಿ ಬದುಕಲು ಇಷ್ಟ ಪಡುತ್ತಿದ್ದೇನೆ… ನನ್ನನ್ನು ಬದುಕಲು ಬಿಡಿ: ನಿಝಾಮ್ ಮನವಿ
ನಾನು ಗಂಡಾಗಿ ಇರಲು ಇಷ್ಟಪಡಲ್ಲ. ಹೆಣ್ಣಾಗಿ ಇರಲು ಇಷ್ಟಪಟ್ಟು ಸ್ವತಃ ನಾನೇ ತೃತೀಯ ಲಿಂಗಿ ಆಗಲು ಹೊರಟಿದ್ದೇನೆ. ನಾನು ಲಿಂಗ ಸರ್ಜರಿ ಮಾಡಿಲ್ಲ. ಸಾರ್ವಜನಿಕರಿಂದ ನನಗೆ ತೊಂದರೆ ಆಗುತ್ತಿದ್ದು ನನ್ನನ್ನು ಬದುಕಲು ಬಿಡಿ ಎಂದು ಸಾನಿಯಾ ಯಾನೆ ನಿಝಾಮ್ ಸ್ಪಷ್ಟನೆ ನೀಡಿದ್ದಾರೆ.


ಇಂದು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಇತ್ತೀಚಿಗೆ ನಿಝಾಮ್ ಎಂಬ ಯುವಕನನ್ನು ಅಪಹರಿಸಿ ಲಿಂಗ ಪರಿವರ್ತಿಸಿ ಹೆಣ್ಣಾಗಿ ಮಾಡಲಾಗಿದೆ ಎಂಬ ವೈರಲ್ ಸುದ್ದಿಗೆ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 28ರ ರಂದು ಮಂಗಳೂರಿನ ತೊಕೊಟ್ಟುನಲ್ಲಿ ನಡೆದ ಮಂಗಳಮುಖಿಯರ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕಾರ್ಯಕ್ರಮದಂದು ಬಂಟ್ವಾಳ ತಾಲೂಕಿನ ಮಹಮ್ಮದ್ ನಿಜಾಮ್ ಎಂಬ ಮುಸ್ಲಿಂ ಸಮುದಾಯದ ಯುವಕ ಸೀರೆ ಉಟ್ಟಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆತನ ಫೋಟೋವನ್ನು ಕಂಡು ಆತನ ಮನೆಯವರು ಮತ್ತು ಸಮುದಾಯದವರು ಆಕ್ರೋಶಗೊಂಡು ಉರ್ವ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಂತರ ನಿಜಾಮ್ ನನ್ನು ಹಾಗೂ ಅವನ ಮನೆಯವರನ್ನು ಉರ್ವ ಪೊಲೀಸ್ ಠಾಣೆಗೆ ಕರೆದು ಮಾತನಾಡಿಸಲಾಗಿದೆ. ಈ ಸಂದರ್ಭ ನಿಜಾಮ್ ಎಂಬ ನಾನು ಗಂಡಾಗಿರಲು ಇಷ್ಟ ಪಡುವುದಿಲ್ಲ. ನಾನು ಹೆಣ್ಣಿನಂತೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿಕೆಯನ್ನು ನೀಡಿರುತ್ತಾನೆ ಎನ್ನಲಾಗಿದೆ.
ಈ ವಿಷಯದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಂಗಳಮುಖಿಯರ ಫೋಟೋ ಹಾಗೂ ವಿಡಿಯೋವನ್ನು ಇಲ್ಲಸಲ್ಲದ ಆಪಾದನೆಯನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನವಸಹಜ ಸಮುದಾಯ ಸಂಘಟನೆಗೆ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಸಂಘಟನೆ ಹಾಗೂ ಯಾವುದೇ ಸದಸ್ಯರಿಗೆ ಸಂಬಂಧ ಇರುವುದಿಲ್ಲ ಎಂದು ಸ್ವತ ನಿಜಾಮ್ ಯಾನೆ ಸಾನಿಯಾ ಸ್ಪಷ್ಟನೆ ನೀಡಿದರು.
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಮುಖಿಯರ ಫೋಟೋ ವಿಡಿಯೋವನ್ನು ವೈರಲ್ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆಯು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.