ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ‘ಲವ್ ಜಿಹಾದ್’ ಬ್ಯಾನರ್
ಸುಳ್ಯ: ಕಳೆದ ಕೆಲವು ದಿನಗಳಿಂದ ಸುಳ್ಯ ನಗರದ ಕೆಲವು ಕಡೆಗಳಲ್ಲಿ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಬಗ್ಗೆ ಬ್ಯಾನರ್ ಅಳವಡಿಸಿದ್ದು ಇದರಿಂದ ಸುಳ್ಯದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ನಡೆದಿದೆ.
ಆದ್ದರಿಂದ ಈ ರೀತಿಯ ಫಲಕಗಳನ್ನು ಅಳವಡಿಸಲು ನಗರ ಪಂಚಾಯತ್ ವತಿಯಿಂದ ಅನುಮತಿ ನೀಡಿದ್ದು ಸರಿಯಲ್ಲ ಎಂದು ಜ. 9ರಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯ ಕೆ ಎಸ್ ಉಮ್ಮರ್ ಹೇಳಿದ್ದಾರೆ.
ಈ ವೇಳೆ ಮಾತನಾಡಿರುವ ಅವರು ಸುಳ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದುವರೆಗೆ ಉಂಟಾಗಲಿಲ್ಲ. ಇಲ್ಲಿ ಎಲ್ಲರೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ನಗರ ಪಂಚಾಯತ್ ಅಧ್ಯಕ್ಷರು ಈ ಮೊದಲು ನಡೆದಂತಹ ಸಭೆಯಲ್ಲಿ ಇಂತಹ ಘಟನೆಗಳು ನಡೆಯಬಾರದು, ಅಲ್ಲದೆ ಈ ರೀತಿ ಬ್ಯಾನರ್ ಅಳವಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ ನೀವು ಮತ್ತೆ ಯಾವ ಉದ್ದೇಶದಿಂದ ಬ್ಯಾನರ್ ಅಳವಡಿಕೆಗೆ ಅನುಮತಿ ನೀಡಿದ್ದೀರಿ ಎಂದು ಕೇಳಿದರು.
ಕೂಡಲೆ ಬ್ಯಾನರನ್ನು ತೆರವುಗೊಳಿಸುವ ಕಾರ್ಯ ನಡೆಯಬೇಕು. ಇಲ್ಲದಿದ್ದರೆ ಅದಕ್ಕೆ ಉತ್ತರವಾಗಿ ನಾವು ಕೂಡ ಇನ್ನೊಂದು ಬ್ಯಾನರನ್ನು ಅಳವಡಿಸಿಬೇಕಾಗುತ್ತದೆ.
ಆ ವೇಳೆ ವಿನಾಕಾರಣ ಊರಿನಲ್ಲಿ ಅಶಾಂತಿಗೆ, ಗೊಂದಲಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದಕ್ಕೆಲ್ಲ ಆಸ್ಪದ ಕೊಡಬೇಡಿ ಎಂದು ಅವರು ಹೇಳಿದರು.
ಈ ಸಂದರ್ಭ ಅವರಿಗೆ ಸಾಥ್ ನೀಡಿದ ಮತ್ತೋರ್ವ ಸದಸ್ಯ ಶರೀಫ್ ಕಂಠಿ ಮಾತನಾಡಿ ನ್ಯಾಯಾಲಯದಲ್ಲಿಯೂ ಕೂಡ ಲವ್ ಜಿಹಾದ್ ಎಂಬ ಪದ ಇರುವುದಿಲ್ಲ ಎಂದು ವಿಷಯ ಪ್ರಸ್ತಾಪವಾಗಿದ್ದು ಬಳಿಕವೂ ನ್ಯಾಯಾಲಯದ ಮಾತಿಗೂ ಬೆಲೆ ಕೊಡದೆ ಈ ರೀತಿಯ ಪದಗಳನ್ನು ಬಳಸುವುದು, ಅಲ್ಲದೆ ಸಮಾಜದಲ್ಲಿ ಒಡಕ್ಕನ್ನು ಉಂಟು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈ ವೇಳೆ ನಗರ ಪಂಚಾಯತ್ ವಿಪಕ್ಷ ಸದಸ್ಯ ಎಂ ವೆಂಕಪ್ಪ ಗೌಡ ಎದ್ದು ನಿಂತು ಉಮ್ಮರ್ ಮತ್ತು ಶರೀಫ್ ಕಂಠಿ ಹೇಳಿದ ಮಾತನ್ನು ಪ್ರತಿಪಾದಿಸಿ
ಯಾವುದೇ ಧರ್ಮಗಳಿಗೆ ಧಕ್ಕೆ ಉಂಟು ಮಾಡುವಂತಹ ಕೆಲಸ ಕಾರ್ಯಗಳು ಇನ್ನೊಂದು ಧರ್ಮದವರಿಂದ ನಡೆಯಬಾರದು. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮತ್ತು ಎಲ್ಲರನ್ನೂ ಒಂದುಗೂಡಿಸುವ ಕೆಲಸ ಕಾರ್ಯಗಳು ಆಗಬೇಕಾಗಿದೆ. ಈ ರೀತಿಯ ಬ್ಯಾನರ್ ಗಳನ್ನು ಅಳವಡಿಸಲು ಅನುಮತಿ ಕೊಡುವುದಾದರೆ ನಾನು ಕೂಡ ಒಂದು ಬ್ಯಾನರ್ ಹಾಕಲು ಸಿದ್ಧನಿದ್ದೇನೆ.
ಹಾಗಿದ್ದರೆ ದೇಶದಲ್ಲಿ ಇತ್ತೀಚಿಗೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಗಗನಕ್ಕೇರುತ್ತಿದ್ದು ಇದನ್ನು ತಿಳಿಯಪಡಿಸುವ ಮತ್ತು ಕಳೆದ ಕೆಲವು ವರ್ಷಗಳ ಹಿಂದೆ ಇದ್ದಂತಹ ಬೆಲೆಯನ್ನು ಮತ್ತು ಪ್ರಸ್ತುತ ಇರುವ ಬೆಲೆಗಳಿರುವ ಬ್ಯಾನರನ್ನು ನಾನು ನಗರದ ಬೇರೆ ಬೇರೆ ಕಡೆಗಳಲ್ಲಿ ಅಳವಡಿಸುತ್ತೇನೆ ಎಂದು ಹೇಳಿದರು.
ಅಲ್ಲದೆ ನಗರ ಪಂಚಾಯತ್ ಅಧ್ಯಕ್ಷರಾಗಿ ತಾವು ಈ ರೀತಿಯ ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಬ್ಯಾನರ್ ಗಳನ್ನು ಅಳವಡಿಸಲು ಅವಕಾಶಗಳನ್ನು ನೀಡಬಾರದಿತ್ತು ಎಂದು ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರಿಗೆ ಹೇಳಿದರು.
ಎಲ್ಲಾ ಪ್ರಶ್ನೆಗೆ ಉತ್ತರಿಸಿದ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನಾನು ಒಂದು ಅಧಿಕಾರದಲ್ಲಿ ಕುಳಿತು ಈ ರೀತಿಯ ವಿಷಯಗಳಿಗೆ ಸಹಕಾರ ನೀಡುವವನಲ್ಲ. ಈ ಜಾಗದಿಂದ ಹೊರ ಬಂದ ಬಳಿಕ ಇದರ ಬಗ್ಗೆ ಎಷ್ಟೇ ಚರ್ಚಿಸಲು ನಾನು ಸಿದ್ಧನಿರುತ್ತೇನೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ತುಂಬಾ ಇದೆ. ಆದರೆ ಅಧ್ಯಕ್ಷನಾಗಿ ಇಲ್ಲಿ ಕುಳಿತು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ.
ಅಲ್ಲದೆ ನನಗೆ ತಿಳಿದು ಬಂದಂತೆ ಆ ರೀತಿಯ ಬ್ಯಾನರ್ ಗಳನ್ನು ನಿನ್ನೆಯ ದಿನವೇ ತೆರವು ಗೊಳಿಸಿರುವ ಮಾಹಿತಿ ಬಂದಿದೆ. ಇಲ್ಲದಿದ್ದರೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಹೇಳಿದರು.
ನಂತರ ನಗರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ವಿಷಯದ ಕುರಿತು ಸುಧೀರ್ಘ ಚರ್ಚೆ ನಡೆಯಿತು.