ಅತ್ಯಾಚಾರ ಆರೋಪಿಯ ತಾಯಿಗೆ ಗುಂಡು ಹೊಡೆದ ಬಾಲಕಿ

50 ವರ್ಷದ ಮಹಿಳೆಯ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಬಾಲಕಿಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ಈಶಾನ್ಯ ದೆಹಲಿಯ ಘೋಂಡಾ ಪ್ರದೇಶದಲ್ಲಿ ವಾರದಿಯಾಗಿದೆ.
ಗುಂಡೇಟಿಗೆ ಒಳಗಾದ ಘೋಂಡಾದ ಸುಬಾಷ್ ಮೊಹಲ್ಲಾದ ನಿವಾಸಿ ಖುರ್ಷಿದಾ ಅವರ ಮಗನ ವಿರುದ್ಧ ಇದೇ ಬಾಲಕಿ 2021ರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಗಾಯಗೊಂಡಿರುವ ಮಹಿಳೆ ಖುರ್ಷಿದಾ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.7ರಂದು ಶನಿವಾರ ಸಂಜೆ ಸುಭಾಷ್ ಮೊಹಲ್ಲಾದಲ್ಲಿ ಮಹಿಳೆಯೊಬ್ಬರ ಮೇಲೆ ಬಾಲಕಿಯೊಬ್ಬಳು ಗುಂಡು ಹಾರಿಸಿರುವುದಾಗಿ ಭಜನಪುರ ಪೊಲೀಸ್ ಠಾಣೆಗೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.
ಖುರ್ಷೀದಾ ನಡೆಸುತ್ತಿದ್ದ ಅಂಗಡಿಗೆ ಬಂದಿದ್ದ ಬಾಲಕಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಳು. ಬಾಲಕಿಯು ಖುರ್ಷಿದಾ ಅವರ ಪುತ್ರನ ವಿರುದ್ಧ 2021ರಲ್ಲಿ ಪೋಕ್ಸೊ ಕಾಯಿದೆ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಳು ಎಂಬುದು ತಿಳಿದು ಬಂದಿದೆ.