ಕರಾವಳಿ

ಸುಳ್ಯ ಶ್ರೀ ಚನ್ನಕೇಶವ ಜಾತ್ರಾ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ



ಸುಳ್ಯ ಶ್ರೀ ಚನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಇಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಠಾಣಾ ಉಪನಿರೀಕ್ಷಕ ದಿಲೀಪ್ ರವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.


ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಐ ದಿಲೀಪ್ ‘ಸುಳ್ಯ ಜಾತ್ರೋತ್ಸವ ಇತಿಹಾಸ ಪ್ರಸಿದ್ಧವಾಗಿದ್ದು ಹಲವಾರು ವರ್ಷಗಳಿಂದ ಶಾಂತಿಯುತವಾಗಿ, ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆದುಕೊಂಡು ಬಂದಂತಹ ಜಾತ್ರೆಯಾಗಿದೆ. ಸುಳ್ಯದಲ್ಲಿ ಎಲ್ಲಾ ಧರ್ಮದವರು ಶಾಂತಿ ಪ್ರಿಯರಾಗಿದ್ದು ಇಲ್ಲಿಯವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವನ್ನು ಕೊಟ್ಟವರಲ್ಲ.
ಹೀಗಿರುವಾಗ ಈ ಬಾರಿಯ ಜಾತ್ರೆಯಲ್ಲಿ ವ್ಯಾಪಾರಗಳನ್ನು ಮಾಡಲು ಇಚ್ಚಿಸುವವರು ದೇವಸ್ಥಾನದ ಆಡಳಿತ ಸಮಿತಿ ನೀಡಿರುವ ಎಲಾಂಗಳನ್ನು ಅನುಸರಿಸಿಕೊಂಡು, ಯಾರು ಏಲಂನಲ್ಲಿ ಭಾಗವಹಿಸಿ ವ್ಯಾಪಾರದ ಸ್ಥಳವನ್ನು ಪಡೆದುಕೊಳ್ಳುತ್ತಾರೋ ಅವರುಗಳು ಅವರ ಜಾಗದ ಅನುಸಾರವಾಗಿ ವ್ಯಾಪಾರಗಳನ್ನು ಮಾಡಿಕೊಳ್ಳುತ್ತಾರೆ.
ಇದರಲ್ಲಿ ಪೊಲೀಸ್ ಇಲಾಖೆಯವರ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ಸಾರ್ವಜನಿಕರು ಅನಾವಶ್ಯಕವಾಗಿ ಬೇರೆ ಬೇರೆ ರೀತಿಯ ಮಾತುಗಳನ್ನು ಕೇಳಿ ಸಾರ್ವಜನಿಕರಿಗೆ ಅಥವಾ ಊರಿಗೆ ಹೆಸರು ಹಾಳು ಮಾಡುವಂತಹ ಪ್ರಕ್ರಿಯೆಯಲ್ಲಿ ಯಾರೂ ಕೂಡ ತೊಡಗಿಕೊಳ್ಳಬಾರದು ಎಂದು ಹೇಳಿದರು.


ಯಾರೋ ಒಬ್ಬರು ಮಾಡುವ ತಪ್ಪಿನಿಂದ ಇಡೀ ಊರಿಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಎಲ್ಲರೂ ಶಾಂತಿಯನ್ನು ಕಾಪಾಡಿಕೊಂಡು ಪೊಲೀಸ್ ಇಲಾಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಕೇಳಿಕೊಂಡರು. ಯಾವುದೇ ವಿಷಯದ ಬಗ್ಗೆ ಸಮಸ್ಯೆಗಳು ಬಂದಲ್ಲಿ ಅದನ್ನು ಪರಸ್ಪರ ವೈ ಮನಸ್ಸುಗಳಿಂದ ಮಾತನಾಡಿಕೊಳ್ಳದೆ ಉಂಟಾಗಿರುವ ಸಮಸ್ಯೆಗಳನ್ನು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿ, ಅಥವಾ ಸಂಬಂಧಪಟ್ಟ ದೇವಸ್ಥಾನದ ಆಡಳಿತ ಸಮಿತಿಯವರ ಗಮನಕ್ಕೆ ತನ್ನಿ ಎಂದು ಹೇಳಿದರು.
ಸಾರ್ವಜನಿಕರ ರಕ್ಷಣೆಗಾಗಿ ನಾವು ಪೊಲೀಸರು ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಈ ವೇಳೆ ಮಾತನಾಡಿದ ಸುಳ್ಯ ನಗರ ಪಂಚಾಯತಿ ಸದಸ್ಯ ಡೇವಿಡ್ ದೀರಾ ಕ್ರಾಸ್ತ ಅನ್ಯಮತಿಯರಿಗೆ ಜಾತ್ರೆಗೆ ಅವಕಾಶವಿಲ್ಲವೆಂದು ಹೇಳಿರುವುದು ಅದು ಕೇವಲ ವ್ಯಾಪಾರ ಮಾಡುವವರಿಗೆ ಮಾತ್ರವಲ್ಲದೆ ಜಾತ್ರೆಯನ್ನು ನೋಡಲು ಬರುವವರೆಗೂ ಕೂಡ ಅನ್ವಯವಾಗುತ್ತದೆಯೋ ಎಂದು ಕೇಳಿದರು.
ಅದಕ್ಕೆ ಉತ್ತರಿಸಿದ ಸುನಿಲ್ ಕೇರ್ಪಳ ಅದರಿಂದ ಯಾವುದೇ ಸಮಸ್ಯೆ ಇಲ್ಲ. ದೇವಸ್ಥಾನದ ಜಾತ್ರೆಯ ಸಂತೆಯ ಸ್ಥಳದಲ್ಲಿ ಅನ್ಯಮತೀಯರಿಗೆ ವ್ಯಾಪಾರ ಮಾಡುವುದಕ್ಕೆ ಮಾತ್ರ ಅನುಮತಿ ನೀಡುವುದಿಲ್ಲ ಎಂದು ಹೇಳಿರುವುದೇ ಹೊರತು ಅಲ್ಲಿಗೆ ಯಾರೂ ಬರಬಾರದು ಎಂದು ಹೇಳಿರುವುದಿಲ್ಲ ಎಂದು ಹೇಳಿದರು.

ಬಳಿಕ ಸಭೆಯಲ್ಲಿ ಸೇರಿದ ವಿವಿಧ ಧರ್ಮದ ಮುಖಂಡರು ನಮ್ಮಿಂದ ಯಾವುದೇ ರೀತಿಯ ಅಶಾಂತಿ ಉಂಟಾಗುವ ಕೆಲಸಗಳು ಜಾತ್ರೆಯಲ್ಲಿ ನಡೆಯುವುದಿಲ್ಲ. ನಾವೆಲ್ಲರೂ ಪರಸ್ಪರ ಒಂದಾಗಿ ಸೌಹಾರ್ದತೆಯಾಗಿ ಇದ್ದೇವೆ ಎಂದು ಮಾತನಾಡಿಕೊಂಡರು.

ಸಭೆಯಲ್ಲಿ ಮುಖಂಡರುಗಳಾದ ಕೆ ಸೋಮನಾಥ ಪೂಜಾರಿ, ಸುನಿಲ್ ಕೆರ್ಪಳ, ಎಸ್ಎಂ ಉಮರ್ ಕುರುಂಜಿ ಗುಡ್ಡೆ, ಅಬ್ದುಲ್ಲ ಪಿ ಎಂ, ಹಸೈನರ್ ಮುರುಳ್ಳ್ಯ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!