ಉಳ್ಳಾಲ: ಪ್ರಾಮಾಣಿಕತೆ ಮೆರೆದ ಸಿಟಿ ಬಸ್ ಸಿಬ್ಬಂದಿಗಳು
ಬಸ್ ಪ್ರಯಾಣದ ವೇಳೆ ಕಳೆದುಹೋದ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಮಾಲೀಕರ ಸಹಕಾರದೊಂದಿಗೆ ಪೊಲೀಸರಿಗೆ ವಾಪಸ್ಸು ಮಾಡಿ ಪ್ರಾಮಾಣಿಕತೆ ಮೆರೆದ ಘಟನೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಜ.1 ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ ಬಸ್ಸಿನಲ್ಲಿ ಬಿಸಿರೋಡ್ ಮೂಲದ ಮಹಿಳೆ ತಸ್ಲಿಮಾ ಪ್ರಯಾಣಿಸುತ್ತಿರುವಾಗ 18 ಗ್ರಾಂ ತೂಕದ ಚಿನ್ನದ ಬಳೆಯನ್ನು ಕಳೆದುಕೊಂಡಿದ್ದರು. ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ಮದುವೆ ಸಮಾರಂಭಕ್ಕೆ ತೆರಳುವಾಗ ಘಟನೆ ನಡೆದಿತ್ತು ಎನ್ನಲಾಗಿದೆ.
ಬಸ್ ನಲ್ಲಿ ಸಿಕ್ಕ ಬಂಗಾರದ ಬಳೆಯನ್ನು ಬಸ್ ಚಾಲಕ ನಿಸಾರ್ ಅಹಮ್ಮದ್ ಹಾಗೂ ನಿರ್ವಾಹಕ ಇಬ್ರಾಹಿಂ ಮಂಜನಾಡಿ ಇಬ್ಬರು ಬಸ್ ಮಾಲೀಕ ಅಬ್ದುಲ್ ರಝಾಕ್ ಎಂಬವರ ಗಮನಕ್ಕೆ ತಂದಿದ್ದರು. ಅವರು ಜ.2 ರಂದು ಉಳ್ಳಾಲ ಪೊಲೀಸ್ ಠಾಣೆಗೆ ಆಗಮಿಸಿ ಚಿನ್ನವನ್ನು ನೀಡಿ ಪ್ರಾಮಾಣಿಕತನ ಮೆರೆದರು.
ಇದೇ ಸಂದರ್ಭ ಚಿನ್ನ ಕಳೆದುಕೊಂಡ ಮಹಿಳೆ ತಸ್ಲೀಮಾ ಅವರು ಠಾಣೆಗೆ ಆಗಮಿಸಿದ್ದು, ಅವರಿಗೆ ಎಸ್. ಐ ಶಿವು ಕುಮಾರ್ ಸಮ್ಮುಖದಲ್ಲಿ ಕಳೆದುಹೋದ ಚಿನ್ನವನ್ನು ವಾಪಸ್ಸು ನೀಡಲಾಯಿತು.
ಬಸ್ ಚಾಲಕ ಮತ್ತು ನಿರ್ವಾಹಕನ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.