ದೇಶದಲ್ಲಿ ಬಿಜೆಪಿಗೆ ಭಾರೀ ವಿರೋಧವಿದೆ-ರಾಹುಲ್ ಗಾಂಧಿ
ದೇಶದಲ್ಲಿ ಬಿಜೆಪಿ ಬಗ್ಗೆ ದೊಡ್ಡ ಮಟ್ಟದ ವಿರೋಧವಿದ್ದು, ಪ್ರತಿಪಕ್ಷಗಳು ಪರ್ಯಾಯ ದೃಷ್ಟಿಕೋನ ಇರಿಸಿಕೊಂಡು ಒಗ್ಗಟ್ಟು ತೋರಿದರೆ 2024ರ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಆಡಳಿತ ಪಕ್ಷಕ್ಕೆ ಕಷ್ಟವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಈ ದಿಸೆಯಲ್ಲಿ ಪರಸ್ಪರ ಗೌರವ ತೋರುವುದು ಅಗತ್ಯವಿದೆ. ‘ಪ್ರತಿಪಕ್ಷಗಳ ನಡುವೆ ಸರಿಯಾದ ಹೊಂದಾಣಿಕೆ ಅಗತ್ಯ. ಜನರ ಬಳಿಗೆ ಸ್ಪಷ್ಟವಾದ ದೃಷ್ಟಿಕೋನ ಇಟ್ಟುಕೊಂಡು ಹೋದರೆ ಒಳ್ಳೆಯದು’ ಎಂದರು.
‘ದೇಶದ ಸಾಂಸ್ಥಿಕ ಚೌಕಟ್ಟು ಕೇವಲ ಒಂದು ಸಿದ್ಧಾಂತದ ಕೈಯಲ್ಲಿದ್ದು, ಅದು ದೇಶದ ಇಡೀ ರಾಜಕೀಯ ವಲಯದಲ್ಲಿ ಮೇಲುಗೈ ಸಾಧಿಸಿದೆ. ಇದನ್ನು ಸೋಲಿಸಬೇಕಾದರೆ, ಮತ್ತೊಂದು ಸ್ಪಷ್ಟ ದೃಷ್ಟಿಕೋನ ಇರುವ ಸಿದ್ಧಾಂತದ ಅಗತ್ಯವಿದೆ’ ಎಂದರು.