ಕರಾವಳಿ

ರಾಷ್ಟ್ರ ಮಟ್ಟದ ವೈಟ್ ಲಿಫ್ಟರ್ ರಾಜೇಂದ್ರ ಪ್ರಸಾದ್ ಹೃದಯಾಘಾತದಿಂದ ನಿಧನ

ಪುತ್ತೂರು: ಇಲ್ಲಿನ ಪಡೀಲಿನಲ್ಲಿ ವಾಸ್ತವ್ಯ ಹೊಂದಿರುವ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಪ್ಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಂದ್ರ ಪ್ರಸಾದ್(42ವ.) ರವರು ಹೃದಯಾಘಾತದಿಂದ ಡಿ.12 ರಂದು ನಿಧನ ಹೊಂದಿದ್ದಾರೆ.

ಮೃತ ರಾಜೇಂದ್ರ ಪ್ರಸಾದ್ ರವರಿಗೆ ಮನೆಯಲ್ಲಿದ್ದ ಸಂದರ್ಭ ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ವತಃ ತಮ್ಮ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಮಗಳನ್ನು ಸುದಾನ ಶಾಲೆಗೆ ಬಿಟ್ಟು ಬಳಿಕ ಚಿಕಿತ್ಸೆಗೆಂದು ಚೇತನಾ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಇಸಿಜಿ ತೆಗೆಯುವ ಮೊದಲೇ ಅವರು ಅಸುನೀಗಿರುತ್ತಾರೆ ಎಂದು ವರದಿಯಾಗಿದೆ.

ಮೃತ ರಾಜೇಂದ್ರ ಪ್ರಸಾದ್ ರವರು ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವೈಟ್ ಲಿಪ್ಟಿಂಗ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾಜೇಂದ್ರ ಪ್ರಸಾದ್ ರವರ ಗರಡಿಯಲ್ಲಿ ನಾಲ್ಕು ಮಂದಿ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಏಕಲವ್ಯ ಪ್ರಶಸ್ತಿ ಪುರಸ್ಕೃತ, ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂನಲ್ಲಿ ನಡೆದಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ(2018ರಲ್ಲಿ ಬೆಳ್ಳಿ ಪದಕ) ಪಡೆದಿರುವ ಗುರುರಾಜ್ ಪೂಜಾರಿಯವರು ರಾಜೇಂದ್ರ ಪ್ರಸಾದ್ ರವರ ಶಿಷ್ಯರಾಗಿದ್ದರು ಎಂಬುದು ಉಲ್ಲೇಖನೀಯ.
ಪುತ್ತೂರಿನ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ರಾಜೇಂದ್ರ ಪ್ರಸಾದ್ ರವರು ವೈಟ್ ಲಿಪ್ಟಿಂಗ್ ನಲ್ಲಿ ರಾಷ್ಟ್ರ ಮಟ್ಟದ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಮೃತ ರಾಜೇಂದ್ರ ಪ್ರಸಾದ್ ರವರು ತಂದೆ ರಾಮಕೃಷ್ಣ, ತಾಯಿ ಇಂದಿರಾವತಿ, ಪತ್ನಿ ಬಂಟ್ವಾಳ ಬಿಇಒ ಕಛೇರಿಯಲ್ಲಿ ಕ್ಲರ್ಕ್ ಆಗಿರುವ ಪ್ರತಿಮಾ, ಪುತ್ರಿಯರಾದ ಸುದಾನ ಶಾಲೆಯಲ್ಲಿ ಐದನೇ ತರಗತಿಯ ಸಮನ್ವಿ, ಎಲ್.ಕೆ.ಜಿಯ ಮಾನ್ವಿ, ಸಹೋದರಿ ಐಶ್ವರ್ಯರವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!