ಫಿಫಾ ವಿಶ್ವಕಪ್: ಘಾನಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಪೋರ್ಚುಗಲ್, ರೊನಾಲ್ಡೋ ಮತ್ತೊಂದು ದಾಖಲೆ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಪೋರ್ಚುಗಲ್ ತಂಡ ಶುಭಾರಂಭ ಮಾಡಿದೆ. ಕೊನೆಯ ಕ್ಷಣದಲ್ಲಿ ಸಿಡಿಸಿದ 2 ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ 2-3 ರಿಂದ ಘಾನಾ ವಿರುದ್ಧ ರೋಚಕ ಜಯ ಸಾಧಿಸಿದೆ.

ನ.24ರಂದು ನಡೆದ ಎಚ್ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್ ಪರ ಕ್ರಿಸ್ಟಿಯಾನೊ ರೊನಾಲ್ಡೊ (65ನೇ ನಿಮಿಷ ಪೆನಾಲ್ಟಿ), ಜಾಹೊ ಫೆಲಿಕ್ಸ್ (78ನೇ ನಿಮಿಷ) ಮತ್ತು ರಾಫೆಲ್ ಲೆಹೊ (80ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರೆ, ಘಾನಾ ಪರ ಆಂಡ್ರೆ ಆಯೆವೊ (73ನೇ ನಿಮಿಷ) ಮತ್ತು ಒಸ್ಮಾನ್ ಬುಕಾರಿ (89ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.
ಪಂದ್ಯದ ಮೊದಲ ಅವಧಿಯ ಆಟದಲ್ಲಿ ಉಭಯ ತಂಡಗಳು ರಕ್ಷಣೆಗೆ ಒತ್ತು ನೀಡಿದ್ದರಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಎರಡನೇ ಅವಧಿಯ ಆಟದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಇದರಿಂದ ದಾಳಿಗೆ ಪ್ರತಿದಾಳಿ ನಡೆದು ಪಂದ್ಯ ಕುತೂಹಲ ಮೂಡಿಸಿತು.
ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಅವಧಿಯ ಆಟದಲ್ಲಿ ಗೋಲು ಸಿಡಿಸಿದರೂ ಫೌಲ್ ಆಗಿದ್ದರಿಂದ ಗೋಲು ಪರಿಗಣನೆಗೆ ಬರಲಿಲ್ಲ. ಆದರೆ ವಿರಾಮದ ನಂತರ ದೊರೆತ ಪೆನಾಲ್ಟಿ ಶೂಟೌಟ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಗೋಲಿನ ಖಾತೆ ತೆರೆದರು.
ಘಾನಾ ಪರ ಆಂಡ್ರೆ ಆಯೆವೊ ಗೋಲು ಸಿಡಿಸಿ ಸಮಬಲ ತಂದರು. ಇದರಿಂದ ಪಂದ್ಯ ರೋಚಕ ತಿರುವು ಪಡೆಯಿತು. ಪಂದ್ಯ ಮುಕ್ತಾಯಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಪೋರ್ಚುಗಲ್ ಪರ ಜಾಹೊ ಫೆಲಿಕ್ಸ್ ಮತ್ತು ರಾಫೆಲ್ ಎದುರಾಳಿ ತಂಡದ ರಕ್ಷಣೆಯನ್ನು ಭೇದಿಸುವ ಮೂಲಕ ಮುನ್ನಡೆ ತಂದುಕೊಟ್ಟಿದ್ದೂ ಅಲ್ಲದೇ ಗೆಲುವು ಖಚಿತಪಡಿಸಿದರು.
ಅದರೆ ಪಂದ್ಯ ಮುಕ್ತಾಯಕ್ಕೆ ಕೆಲವೇ ಕ್ಷಣಗಳಿರುವಾಗ ಒಸ್ಮಾನ್ ಬುಕಾರಿ ಗೋಲು ಸಿಡಿಸಿ ಅಂತರ ತಗ್ಗಿಸಿದರು. ತನ್ನ 37ನೇ ವಯಸ್ಸಿನಲ್ಲಿ ಗೋಲು ಹೊಡೆದ ರೊನಲ್ಡೋ ಅವರು ಹಿರಿಯ ಆಟಗಾರನಾಗಿ ಗೋಲು ಹೊಡೆದ 2ನೇ ಆಟಗಾರನಾಗಿ ದಾಖಲೆ ಬರೆದರು.