ಯುವಜನತೆ ಗಾಂಜಾ, ಅಮಲು ಪದಾರ್ಥಗಳಿಂದ ದೂರವಿರಿ: ಪುತ್ತೂರು ತಂಙಳ್ ಕರೆ
ಪುತ್ತೂರು: ಯುವ ಸಮೂಹ ಗಾಂಜಾದಂತಹ ಅಮಲು ಪದಾರ್ಥಗಳಿಗೆ ಬಲಿಯಾಗುವ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು ಇದರ ವಿರುದ್ಧ ಪರಿಣಾಮಕಾರಿಯಾದ ಜಾಗೃತಿಅಗತ್ಯವಿದೆ. ಅಮಲು ಪದಾರ್ಥಗಳಿಗೆ ವಿದ್ಯಾರ್ಥಿಗಳು, ಯುವಕರು ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು.

ನ.19ರಂದು ಸಾರೆಪುಣಿ ಮದ್ರಸ ವಠಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಂಜಾದಂತಹ ಅಮಲು ಪದಾರ್ಥಗಳತ್ತ ಯುವ ಜನತೆ ಆಕರ್ಷಿತರಾಗುವುದನ್ನು ತಡೆಯುವ ಅವಶ್ಯಕತೆಯಿದ್ದು ಇಲ್ಲದೇ ಹೋದಲ್ಲಿ ಸಮಾಜಕ್ಕೂ, ಸಮುದಾಯಕ್ಕೂ ದೊಡ್ಡ ನಷ್ಟ ಉಂಟಾಗಲಿದೆ ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳಲ್ಲೂ ಈ ಬಗ್ಗೆ ಜಾಗೃತಿಯಾದರೆ ಉತ್ತಮ ಎಂದು ಅವರು ಹೇಳಿದರು.
ಧಾರ್ಮಿಕ ವಿಚಾರಧಾರೆಗಳಿಂದ ಯುವ ಸಮೂಹ ದೂರ ಸರಿಯುತ್ತಿದ್ದು ಕ್ರೀಡೆ, ಮನೋರಂಜನಾ ಕ್ಷೇತ್ರಗಳಿಗೆ ಹೆಚ್ಚು ಮಹತ್ವ ನೀಡಿದಂತೆ ಕಂಡುಬರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇಸ್ಲಾಂ ಧರ್ಮದ ತತ್ವದಡಿಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಮುಂಚೂಣಿಯಲ್ಲಿ ಇರುವುದು ಅವಶ್ಯಕತೆಯಾಗಿದೆ ಎಂದು ಪುತ್ತೂರು ತಂಙಳ್ ಹೇಳಿದರು.