ಕರಾವಳಿ

ವಿಟ್ಲ: ಅನ್ಯ ಕೋಮಿನ ಜೋಡಿ ಪತ್ತೆ ಪ್ರಕರಣಕ್ಕೆ ತಿರುವು: ಅಪ್ರಾಪ್ತ ಬಾಲಕನ ಸಹಿತ ಇಬ್ಬರ ವಿರುದ್ಧ ಅಪಹರಣ ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಅನ್ಯ ಕೋಮಿನ ಯುವಕ,ಯುವತಿಯೊಂದಿಗೆ ಇದ್ದ ಹಿಂದೂ ಯುವತಿಯ ಸಹಿತ ನಾಲ್ವರನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನ.20ರಂದು ನಡೆದಿದ್ದು, ಇದೀಗ ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಅನ್ಯಕೋಮಿನ ಅಪ್ರಾಪ್ತ ಬಾಲಕನ ಸಹಿತ ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಿದ್ದ ಕಬಕ ಪರಿಸರದ ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಅದೇ ಪರಿಸರದ ಅನ್ಯಕೋಮಿನ ಯುವತಿಯ ಸಹಿತ ಓರ್ವೆ ಹಿಂದೂ ಯುವತಿ ಇಡ್ಕಿದು ಗ್ರಾಮದ ಅಳಕೆಮಜಲು ಸಮೀಪದ ನಿನ್ನಿಕಲ್ಲಿನಲ್ಲಿರುವ ಪಾರ್ಕ್ ಗೆ ಬಂದಿದ್ದರು.

ಅನ್ಯಕೋಮಿನ ಯುವತಿ, ಯುವಕರೊಂದಿಗೆ ಹಿಂದೂ ಯುವತಿ ಇರುವ ಬಗ್ಗೆ ಗಮನಿಸಿದ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಠಾಣಾ ಸಿಬ್ಬಂದಿಗಳು ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದರು.

ಆ ಬಳಿಕದ ಬೆಳವಣಿಗೆಯಲ್ಲಿ ಹಿಂದೂ ಯುವತಿಯ ಪೋಷಕರು ನೀಡಿದ ದೂರಿನಂತೆ ಇದೀಗ ಅನ್ಯಕೋಮಿನ ಅಪ್ರಾಪ್ತ ಬಾಲಕ ಸಹಿತ ಮಹಮ್ಮದ್‌ ಶಾಕೀರ್‌ ಎಂಬಾತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!