ಪುತ್ತೂರು: ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಮಹಿಳೆಯರಿಗೆ ಕಿರುಕುಳ: ಆರೋಪಿ ಪೊಲೀಸ್ ವಶ
ಪುತ್ತೂರು: ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ನ.20ರಂದು ನಡೆದಿದ್ದು, ಈ ಕುರಿತು ಆರೋಪಿ ಚಲಾಯಿಸುತ್ತಿದ್ದ ಆಟೋ ರಿಕ್ಷಾದ ನೋಂದಾವಣೆ ಸಂಖ್ಯೆ ಜಾಡು ಹಿಡಿದು ಆರೋಪಿಯನ್ನು ನ.21ರಂದು ಮಹಿಳಾ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕಾಲು ನೋವಿನಿಂದ ಬಳಲುತ್ತಿದ್ದ ತನ್ನ ಅತ್ತೆಯ ಆರೈಕೆಗೆ ಬಂದಿದ್ದ ಮಹಿಳೆಯೋರ್ವರಿಗೆ ಅಪರಿಚಿತ ವ್ಯಕ್ತಿ ಕಿರುಕುಳ ನೀಡಿದ್ದರು. ಕೊನೆಗೆ ಅಪರಿಚಿತ ವ್ಯಕ್ತಿ ಆಸ್ಪತ್ರೆಯ ವಠಾರದಲ್ಲಿ ಹೋಗಿ ಬರುತ್ತಿರುವ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ಗಮನಿಸಿ ಆತನನ್ನು ವಿಚಾರಿಸಲು ಮಹಿಳೆಯ ಪತಿ ಮತ್ತು ಸಾರ್ವಜನಿಕರು ತೆರಳಿದಾಗ ಆತ ಅಲ್ಲಿಂದ ಆಟೋ ರಿಕ್ಷಾ ಚಲಾಯಿಸಿಕೊಂಡು ಪರಾರಿಯಾಗಿದ್ದ.
ಈ ಕುರಿತು ಮಹಿಳೆಯೊಬ್ಬರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರು ನೀಡಿದ್ದರು. ಮಹಿಳಾ ಪೊಲೀಸರು ಆಟೋ ರಿಕ್ಷಾದ ನೋಂದಾವಣೆ ಸಂಖ್ಯೆಯನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.