ಬೆಳ್ತಂಗಡಿಯ ಮೂವರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ- ಗೃಹ ಸಚಿವರನ್ನು ಭೇಟಿಯಾದ ರಕ್ಷಿತ್ ಶಿವರಾಂ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮೂವರನ್ನು ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾ.24ರಂದು ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ನಿಜಾಂಶ ಹೊರಬರಲು ಮತ್ತು ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಲು ಮನವಿ ಮಾಡಿದರು.
ಅದಲ್ಲದೆ ಮೃತದೇಹದ ಡಿಎನ್ಎ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ವೇಳೆ ತುಮಕೂರು ಪೊಲೀಸ್ ಅಧಿಕಾರಿಯನ್ನು ಗೃಹ ಸಚಿವರು ಕರೆ ಮಾಡಿ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಪೊಲೀಸ್ ಅಧಿಕಾರಿ ಪ್ರಕರಣದ ಎಲ್ಲಾ ಮಾಹಿತಿಯನ್ನು ನೀಡಿದರು. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು ಎರಡು ದಿನದಲ್ಲಿ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.