ಗುಜುರಿ ಸಂಗ್ರಹಗಾರರ ದುರ್ವರ್ತನೆ
ಗುಜುರಿ ಇಲ್ಲವೆಂದರೂ ಕೇಳದೆ ಬಲವಂತದಿಂದ ಗುಜುರಿ ಸಂಗ್ರಹ-ದೂರು
ಪುತ್ತೂರು: ಮನೆಗೆ ಬಂದ ಗುಜುರಿ ಸಂಗ್ರಹಗಾರರಲ್ಲಿ ನಮ್ಮಲ್ಲಿ ಯಾವುದೇ ಗುಜುರಿ ವಸ್ತುಗಳು ಇಲ್ಲವೆಂದು ಹೇಳಿದರೂ ಕೇಳದೆ ನೇರವಾಗಿ ಮನೆಗೆ ಬಂದು ಹುಡುಕಾಡಿದ್ದು ಅಲ್ಲದೆ ಮನೆ ಬಳಕೆಗೆ ಇಟ್ಟಿದ್ದ ವಸ್ತುಗಳನ್ನು ಕೊಂಡೊಯ್ದು ದುರ್ವರ್ತನೆ ತೋರಿದ್ದಾರೆ ಎಂದು ಬಡಗನ್ನೂರು ನೆಕ್ಕರೆ ನಿವಾಸಿ ಆನಂದ ಎನ್.ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾನು ಮತ್ತು ನನ್ನ ಪತ್ನಿ ಉದ್ಯೋಗ ನಿಮಿತ್ತ ಮನೆಯಿಂದ ಹೊರಹೋಗುತ್ತಿದ್ದ ಮನೆಯಲ್ಲಿ ಬುದ್ದಿಮಾಂದ್ಯ ಸಹೋದರಿಯೊಬ್ಬಳೇ ಇರುತ್ತಿದ್ದಳು. ನ.15 ರಂದು ಮಧ್ಯಾಹ್ನದ ವೇಳೆಯಲ್ಲಿ ಹಳದಿ ಬಣ್ಣದ ಟಾಟಾ ಏಸ್ ವಾಹನದಲ್ಲಿ ಬಂದ ಗುಜುರಿ ಸಂಗ್ರಹಗಾರರು ಮನೆಗೆ ಬಂದಿದ್ದು ಈ ವೇಳೆ ಸಹೋದರಿ ನಮ್ಮಲ್ಲಿ ಯಾವುದೇ ಗುಜುರಿ ವಸ್ತುಗಳು ಇಲ್ಲ ಎಂದು ಎಷ್ಟೇ ಹೇಳಿದರೂ ಕೇಳದೆ ನೇರವಾಗಿ ಮನೆಗೆ ಬಂದದ್ದು ಅಲ್ಲದೆ ಮನೆಯ ಸುತ್ತಮುತ್ತ ಹುಡುಕಾಡಿ ಮನೆ ಬಳಕೆಗೆ ಇಟ್ಟಿದ್ದ ಪೈಪುಗಳನ್ನು ಹಾಗೂ ಸುಮಾರು ೨25 ಕೆ.ಜಿ ತೂಕದ ಕಬ್ಬಿಣದ ಕಲ್ಲು (ಕಬ್ಬಿಣದ ಕೆಲಸಕ್ಕೆ ಬಳಸುವ ಕಲ್ಲು) ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಹೋದರಿಯಲ್ಲಿ 40 ರೂಪಾಯಿಗಳನ್ನು ನೀಡಿರುತ್ತಾರೆ. ಗುಜುರಿ ವಸ್ತುಗಳು ಇಲ್ಲ ಎಂದು ಹೇಳಿದರೂ ಬಲವಂತವಾಗಿ ಮನೆಯ ಸುತ್ತಮುತ್ತ ಹುಡುಕಾಡಿದ್ದು ಅಲ್ಲದೆ ಬಳಕೆಗೆ ಇಟ್ಟಿದ್ದ ವಸ್ತುಗಳನ್ನು ಕೊಂಡುಹೋದ ಗುಜುರಿ ಸಂಗ್ರಹಗಾರರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆನಂದ ಎನ್.ರವರು ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾರೆ.