ಸುಳ್ಯ ಕಲ್ಲುಮುಟ್ಲು ನಗರ ಪಂಚಾಯತ್ ಪಂಪ್ ಹೌಸ್ ಬಳಿ ಮಾಟ. ಮಂತ್ರನಡೆಯಿತೇ?ವಾಮಾಚಾರದ ಕುರುಹು ಪತ್ತೆ:ಸ್ಥಳೀಯರಲ್ಲಿ ಮೂಡಿದ ಕುತೂಹಲ
ಸುಳ್ಯ: ಸುಳ್ಯ ನಗರ ಪಂಚಾಯತ್‌ನ ನೀರು ಸರಬರಾಜು ಮಾಡುವ ಪಂಪ್ ಹೌಸ್ ಬಳಿಯಲ್ಲಿ ನ.16 ರಂದು ಬೆಳಿಗ್ಗೆ ಕೆಲವೊಂದು ವಿಚಿತ್ರ ವಸ್ತುಗಳು ಪತ್ತೆಯಾಗಿದ್ದು ಇಲ್ಲಿ ಮಾಟ ಮಂತ್ರ ನಡೆಯಿತೇ?
ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ.
ಇದಕ್ಕೆ ಸಂಬಂಧಿಸಿದಂತೆ ಕುರುಹು ಪತ್ತೆಯಾಗಿದ್ದು, ಕುಂಕುಮ, ಹರಿಸಿನ ಲೇಪಿತ ಗೆಂಧಾಳೆ
ಬೊಂಡ, ಬೊಂಡದಲ್ಲಿ ಕರಿ ಬೇವಿನ ಸೊಪ್ಪು ಇರಿಸಲಾದ ರೀತಿಯಲ್ಲಿ ಕಂಡುಬಂದಿದೆ.
ಬೆಳ್ತಿಗೆ ಅಕ್ಕಿಯ ಮೇಲೆ ಬೊಂಡ ಇರಿಸಲಾಗಿತ್ತು. ಪಯಸ್ವಿನಿ ನದಿ ಬದಿಯಲ್ಲಿರುವ ಕಲ್ಲುಮುಟ್ಲು ಪಂಪ್ ಹೌಸ್‌ನ ಜನರೇಟರ್ ಶೆಡ್ ಕಟ್ಟಡದ ಬಳಿಯಲ್ಲಿ ಈ ವಸ್ತುಗಳು ಕಂಡು ಬಂದಿದ್ದು ಬೆಳಿಗ್ಗೆ ಪಂಪ್ ಹೌಸ್‌ನ ಸಿಬ್ಬಂದಿಗಳು ಸುಳ್ಯ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರಿಗೆ ಮಾಹಿತಿ ನೀಡಿದ್ದಾರೆ.
ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬಳಿಕ ಬೊಂಡ ಮತ್ತಿತರ ವಸ್ತುಗಳನ್ನು ತೆರವು ಮಾಡಿದರು. ಯಾರು ಇರಿಸಿದ್ದಾರೆ ಮತ್ತು ಯಾಕೆ ಈ ವಸ್ತುಗಳನ್ನು ಇಲ್ಲಿ ತಂದಿರಿಸಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ ಎಂದು ತಿಳಿದುಬಂದಿದೆ.