ಕರಾವಳಿಕ್ರೈಂ

ಪುತ್ತೂರು: ಇನ್ಸೂರೆನ್ಸ್ ಹೆಸರಿನಲ್ಲಿ 2.37 ಲಕ್ಷ ರೂ ವಂಚಿಸಿದ ಆರೋಪಿಯ ಬಂಧನ


ಪುತ್ತೂರು: ಪುತ್ತೂರು ನಿವಾಸಿಯೊಬ್ಬರಿಗೆ ಆನ್‌ಲೈನ್ ಮೂಲಕ 2.37 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.




ಬಂಧಿತ ಆರೋಪಿಯು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯದ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ.



ಪುತ್ತೂರಿನ ನಿವಾಸಿ ಯಶೋಧರ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ವಿಮಾ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳಿಂದ ಅವರಿಗೆ ಕರೆ ಮಾಡಿದ್ದ. ಆರಂಭದಲ್ಲಿ ಹೊಸ ವಿಮಾ ಪಾಲಿಸಿಯನ್ನು ಖರೀದಿಸಲು ಮತ್ತು ಪ್ರೀಮಿಯಂ ಪಾವತಿಸಲು ಒತ್ತಾಯಿಸಿದ್ದ. ಯಶೋಧರ ಅವರು ಈ ಆಫರ್ ಅನ್ನು ತಿರಸ್ಕರಿಸಿದಾಗ, ಚಾಲ್ತಿಯಲ್ಲಿರುವ ವಿಮಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಹಾಯ ಮಾಡುವುದಾಗಿ ನಂಬಿಸಿದ್ದ.

ಈ ನೆಪದಲ್ಲಿ ವಂಚಕನು ದೂರುದಾರರ ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಒಟಿಪಿ ಪಡೆದುಕೊಂಡಿದ್ದ. ಈ ಗೌಪ್ಯ ಮಾಹಿತಿಯನ್ನು ಬಳಸಿಕೊಂಡು ಆರೋಪಿಯು ದೂರುದಾರರ ಕ್ರೆಡಿಟ್ ಕಾರ್ಡ್‌ನಿಂದ 2,37,036 ರೂಪಾಯಿಗಳನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದ.

ದೂರಿನ ಆಧಾರದ ಮೇಲೆ, ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66(D)  IT ACT & 318(4), 319(2)  BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ತಂಡವು ತನಿಖೆ ನಡೆಸಿ ಫೆಬ್ರವರಿ 11 ರಂದು ಆರೋಪಿಯನ್ನು ಬಂಧಿಸಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!