ವಿಟ್ಲ: ಅಬ್ದುಲ್ ಸಮದ್ ಕೊಲೆ ಪ್ರಕರಣ-ಆರೋಪಿಗೆ ಪೊಲೀಸ್ ಕಸ್ಟಡಿ
ಬಂಟ್ವಾಳ: ಸುರಿಬೈಲು ನಿವಾಸಿ ಸುಲೈಮಾನ್ ಎಂಬವರ ಪುತ್ರ 19 ವರ್ಷ ಪ್ರಾಯದ ಅಬ್ದುಲ್ ಸಮದ್ ಅವರನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮನನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಲದ ಆದೇಶ ಮಾಡಿದೆ.
ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಅಬ್ದುಲ್ ಸಮದ್ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ.
ಅದ್ರಾಮ ಹಾಗೂ ಅಬ್ದುಲ್ ಸಮದ್ ಇಬ್ಬರೂ ಪರಿಚಿತರಾಗಿದ್ದು ಇತ್ತೀಚೆಗಷ್ಟೇ ಬೆಂಗಳೂರಿಗೆ ಉದ್ಯೋಗಕ್ಕೆಂದು ತೆರಳಿದ್ದ ಅಬ್ದುಲ್ ಸಮದ್‌ನನ್ನು ಊರಿಗೆ ಬರುವಂತೆ ಅದ್ರಾಮ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಅದರಂತೆ ನ.1ರಂದು ಊರಿಗೆ ಬಂದಿದ್ದ ಸಮದ್‌ನನ್ನು ಅದ್ರಾಮ ಅವರು ತಾನಿರುವಲ್ಲಿಗೆ ಕರೆಸಿಕೊಂಡಿದ್ದು ಬಳಿಕ ತನ್ನ ರಿಕ್ಷಾದಲ್ಲಿ ಇರಾ ಗುಡ್ಡವೊಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದ ಅವರಿಬ್ಬರ ಮಧ್ಯೆ ಅದ್ಯಾವುದೋ ವಿಚಾರಕ್ಕೆ ಗಲಾಟೆ ಆಗಿದೆ ಎನ್ನಲಾಗಿದೆ. ಸಮದ್ ಬೆಂಗಳೂರಿಗೆ ಹೋಗುವ ವಿಚಾರದಲ್ಲಿ ಇಬ್ಬರೊಳಗೆ ಚರ್ಚೆ ನಡೆದು ಅದು ವಿಕೋಪಕ್ಕೆ ಹೋಗಿತ್ತು ಎನ್ನುವ ಮಾತುಗಳೂ ಕೇಳಿ ಬಂದಿದೆ. ಇದೇ ವಿಚಾರವಾಗಿ ಸಮದ್‌ನನ್ನು ಕೊಲೆ ಮಾಡಿರುವ ಅದ್ರಾಮ ಬಳಿಕ ಸೀಮೆ ಎಣ್ಣೆಯನ್ನು ಸಮದ್ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಮದ್‌ನನ್ನು ಕೊಲೆ ಮಾಡಿದ ಬಳಿಕ ತನ್ನ ರಿಕ್ಷಾದಲ್ಲಿ ಗುಡ್ಡದಿಂದ ಹಿಂತಿರುಗಿದ್ದ ಅದ್ರಾಮ ಕೊಲೆ ವಿಚಾರ ಬೆಳಕಿಗೆ ಬರುವುದು ಬೇಡ ಎನ್ನುವ ನಿಟ್ಟಿನಲ್ಲಿ ಸಮದ್ ಮೃತದೇಹವನ್ನು ಗುಂಡಿಗೆ ಹಾಕಿ ಮುಚ್ಚುವ ಪ್ಲಾನ್ ಮಾಡಿಕೊಂಡಿದ್ದ. ಅದಕ್ಕಾಗಿ ತನ್ನ ಸಂಬಂಧಿಕನಾಗಿರುವ ಕೊಕ್ಕೆಪುಣಿಯ ಸೆಲೀಂ ಎಂಬವರಿಗೆ ವಿಚಾರ ತಿಳಿಸಿ ಸಹಕರಿಸುವಂತೆ ಕೇಳಿಕೊಂಡಿದ್ದ. ಇದಕ್ಕೆ ಒಪ್ಪದ ಸೆಲೀಂ ಅವರು ವಿಚಾರವನ್ನು ಪೊಲೀಸರ ಗಮನಕ್ಕೆ ತಂದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ.
ಆರೋಪಿ ಅದ್ರಾಮ ಯಾವ ಕಾರಣಕ್ಕಾಗಿ ಅಬ್ದುಲ್ ಸಮದ್‌ನನ್ನು ಕೊಲೆ ಮಾಡಿದ್ದಾನೆ..? ಗುಡ್ಡದಲ್ಲಿ ಅವರೊಳಗೆ ನಿಜವಾಗಿಯೂ ನಡೆದದ್ದೇನು..? ಕೊಲೆಯ ಹಿಂದೆ ಯಾವೆಲ್ಲಾ ನಿಗೂಢತೆಗಳಿವೆ ಎನ್ನುವ ಸ್ಪಷ್ಟ ವಿಚಾರ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.